ನೇಕಾರರ 100 ಕೋಟಿ ರೂ.ಸಾಲ ಮನ್ನಾ ಘೋಷಣೆ: ಮುಖ್ಯಮಂತ್ರಿಗೆ ಅಭಿನಂದನೆ
ಬೆಂಗಳೂರು, ಜು.27: ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಯೋಜನೆಗೆ 100 ಕೋಟಿ ರೂ.ಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವುದನ್ನು ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠ ಸ್ವಾಗತಿಸಿದೆ. ಇದಕ್ಕಾಗಿ, ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಅಭಿನಂದಿಸಿದ್ದಾರೆ.
ಮುಖ್ಯಮಂತ್ರಿ ಘೋಷಿಸಿರುವ ಸಾಲಮನ್ನಾ ಯೋಜನೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ನೇಕಾರರ ಸೇವಾ ಸಂಘಗಳಿಂದ ಸಾಲ ಪಡೆದಿರುವ ಸುಮಾರು 50 ಸಾವಿರ ನೇಕಾರರು ಫಲಾನುಭವಿಗಳಿದ್ದಾರೆ ಎಂದು ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಜಿ.ರಮೇಶ್ ತಿಳಿಸಿದ್ದಾರೆ. ಅಸಂಘಟಿತ ನೇಕಾರರು, ಸಹಕಾರ ಸಂಘಗಳ ವ್ಯಾಪ್ತಿಗೊಳಪಡುವ ನೇಕಾರರು, ಕೈಮಗ್ಗ ಅಭಿವೃದ್ಧಿ ನಿಗಮಗಳಲ್ಲಿ ದುಡಿಯುವ ನೇಕಾರರು ಹಾಗೂ ವಿದ್ಯುತ್ ಚಾಲಿತ ಮಗ್ಗಗಳಲ್ಲಿ ದುಡಿಯುವ ನೇಕಾರರು ಸಾಲಮನ್ನಾದ ಲಾಭ ಪಡೆಯುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ