ಮಾಹಿತಿ ತಂತ್ರಜ್ಞಾನ ಹಿಂದುಳಿಯಲು ಮೂಲಸೌಕರ್ಯಗಳ ಕೊರತೆ ಕಾರಣ: ನಿರ್ಮಲಾನಂದ ಸ್ವಾಮೀಜಿ

Update: 2019-07-27 17:53 GMT

ಚಿಕ್ಕಮಗಳೂರು, ಜು.27: ಹೊಸ ಆವಿಷ್ಕಾರಗಳು, ಹೊಸ ಯೋಜನೆಗಳು ಸಮಾಜ ಹಾಗೂ ಜನರ ಮನಸ್ಸಿಗೆ ತಲುಪುವಂತಿರಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ದುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.

ನಗರದ ಎಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಸಂಶೋಧನೆಗಳು ನಮ್ಮ ದೇಶದಲ್ಲಿ ಹಿಂದುಳಿದಿದೆ. ವಿದೇಶದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದ್ದು, ನಮ್ಮ ದೇಶದಲ್ಲಿ ಸಂಶೋಧನೆಗಳಿಗೆ ಕಟ್ಟಡ, ಮೂಲ ಸೌಲಭ್ಯಗಳ ಕೊರತೆ ಇದೆ. ಇದನ್ನು ಪೂರೈಸಲು ಸರಕಾರಗಳು ಮಹತ್ವ ನೀಡಿದರೆ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಸಾಧ್ಯ ಎಂದರು.

ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡೂ ಒಂದಕ್ಕೊಂದು ಪೂರಕ. ವಿಜ್ಞಾನಿ ಹೊರ ಜಗತ್ತನ್ನು ನೋಡುತ್ತಾನೆ. ಸಂತ ಒಳಗಿನ ಅನ್ವೇಷಣೆ ಮಾಡುತ್ತಾನೆ. ಬುದ್ಧ ಇದಕ್ಕೊಂದು ನಿದರ್ಶನ. ಆತ ಜ್ಞಾನವನ್ನು ಅರಗಿಸಿಕೊಂಡು ಬಾಹ್ಯ ಜಗತ್ತಿನ ಆಕರ್ಷಣೆಗಳನ್ನು ತ್ಯಜಿಸಿ ಆತ್ಮ ಸಾಕ್ಷಾತ್ಕಾರದಿಂದ ಗೌತಮ ಬುದ್ಧನಾದ ಎಂದರು.

ಆಧ್ಯಾತ್ಮಿಕ ಜ್ಞಾನ ಶಾಶ್ವತ ಸತ್ಯ. ಜ್ಞಾನದಲ್ಲೂ ಆಧ್ಯಾತ್ಮಿಕತೆ ಮಿಳಿತವಾಗಿರಬೇಕು. ಒಬ್ಬ ವಿದ್ಯಾರ್ಥಿಯನ್ನು ನಿನ್ನ ವಿದ್ಯಾರ್ಹತೆ ಏನು ಎಂದು ಕೇಳಿದರೆ ಅವರು ಕಲೆ, ವಿಜ್ಞಾನ ಎಂದು ಹೇಳುತ್ತಾನೆ. ಒಬ್ಬ ಪ್ರಾಧ್ಯಾಪಕನನ್ನು ಕೇಳಿದರೆ ಅವರು ನಾನು ವಿಜ್ಞಾನದ ವಿದ್ಯಾರ್ಥಿ ಎನ್ನುತ್ತಾರೆ. ವಿಷಯದ ಆಳಕ್ಕೆ ಇಳಿದು ಮಿಂದು ಬಂದಾಗ ಅವರು ಜಗತ್ತಿನ ವಿದ್ಯಮಾನ ಅರ್ಥ ಮಾಡಿಕೊಂಡು ನೈಜ ವ್ಯಕ್ತಿಯಾಗುತ್ತಾನೆ ಎಂದರು.

ಇತ್ತೀಚೆಗೆ ತಾವು ಅಮೆರಿಕಾಕ್ಕೆ ಹೋಗಿದ್ದಾಗ ಒಬ್ಬ ವಿದ್ಯಾರ್ಥಿನಿ ಎದ್ದು ನಿಂತು ನೀವು ಸನ್ಯಾಸಿಗಳಾಗಿದ್ದು, ಆಧ್ಯಾತ್ಮಿಕತೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಭಾಷೆಯಲ್ಲಿ ಹೇಗೆ ಬಳಸುತ್ತೀರಿ ಎಂದು ಪ್ರಶ್ನಿಸಿದರು. ಆ ದೇಶದ ಪರಂಪರೆಯಲ್ಲಿ ವಿಜ್ಞಾನ, ಧರ್ಮ ಬೇರೆ ಬೇರೆ ವ್ಯಾಖ್ಯೆಯ ಅಸ್ತಿತ್ವ ಹೊಂದಿದೆ. ನಮ್ಮ ದೇಶದಲ್ಲಿ ಇವು ಒಂದಕ್ಕೊಂದು ಪೂರಕವಾಗಿವೆ ಎಂದು ಹೇಳಿದರು.

ವಿ ಎಂದರೆ ವಿಜ್ಞಾನ, ಜ್ಞಾ ಎಂದರೆ ಜ್ಞಾನ, ತಂ ಎಂದರೆ ತಂತ್ರಜ್ಞಾನ ಎಂದರ್ಥ. ವಿಜ್ಞಾನ ಮತ್ತು ತಂತ್ರಜ್ಞಾನ ಎರಡೂ ಕಡೆ ಇದ್ದೂ ಮಧ್ಯೆ ಜ್ಞಾನ ಇರಬೇಕು. ಜ್ಞಾನ ಎರಡಕ್ಕೂ ಸಂಪರ್ಕ ಸೇತು, ಇದರಿಂದ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯ ಎಂದ ಅವರು, ವಿಜ್ಞಾನಿಯ ಸಿದ್ಧಾಂತ ಕೆಲವು ವರ್ಷಗಳ ನಂತರ ಸರಿಯಲ್ಲ ಎಂದು ವಾದಿಸಬಹುದು. ನಿಮ್ಮ ಮುಂದೆ ಈಗ ಇರುವ ಆಯ್ಕೆಗಳೇನೆಂದರೆ, ಆವಿಷ್ಕಾರ ನಡೆಸಿ ಹೊಸದನ್ನು ಸಂಶೋಧಿಸಿ, ಒಳಗಿನ ಸತ್ಯವನ್ನು ಅರ್ಥ ಮಾಡಿಕೊಂಡು ನಿಮ್ಮ ಜೀವನವನ್ನು ಉದಾತ್ತಗೊಳಿಸಿಕೊಳ್ಳಬೇಕು ಎಂದರು.

ಬೆಂಗಳೂರಿನ ಬೊಬಿಜಿನಿ ಸಂಸ್ಥೆಯ ಸಿಇಒ ರಾಕೇಶ್ ತೆರಗುಂಡಿ ಮಾತನಾಡಿ, ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಕಾರ್ಯಗಳು ನಡೆಯುತ್ತಿವೆ. ಆದರೆ ಸಂಪನ್ಮೂಲ, ಭಾಗವಹಿಸುವಿಕೆಯಲ್ಲಿ ಜನರ ಕೊರತೆ ಇದೆ. ಇಂಜಿನಿಯರಿಂಗ್ ಪದವೀಧರರು ಅವಕಾಶಗಳನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಎಐಟಿ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಎಐಟಿ ಕುಲ ಸಚಿವ ಡಾ.ಸುಬ್ಬರಾಯ, ಎ-10 ನೆಟ್‍ವರ್ಕ್ಸ್ ನ ಉಪಾಧ್ಯಕ್ಷ ಕಿಶೋರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಾ ರವಿಕುಮಾರ್, ಎಐಟಿ ಆಡಳಿತ ಮಂಡಳಿಯ ಎಸ್.ವಿ.ಮಂಜುನಾಥ್, ಕೆ.ಮೋಹನ್, ಒಕ್ಕಲಿಗರ ಜಿಲ್ಲಾ ಸಂಘದ ಉಮೇಶ್ಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News