ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ ತಾಂಡವವಾಡುತ್ತಿದೆ: ನ್ಯಾ.ಸುಧೀಂದ್ರರಾವ್

Update: 2019-07-27 18:13 GMT

ಚಿಕ್ಕಮಗಳೂರು, ಜು.27: ವಕೀಲರು ತಮ್ಮ ವೃತ್ತಿಯಲ್ಲಿ ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎನ್.ಕೆ.ಸುಧೀಂದ್ರರಾವ್ ಹೇಳಿದ್ದರು. 

ಅವರು ಶನಿವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ತರೀಕೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ತರೀಕೆರೆ ನ್ಯಾಯಾಲಯ ಸಂಕೀರ್ಣದ ಎರಡನೇ ಮಹಡಿಯ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಭ್ರಷ್ಟಾಚಾರ ಮತ್ತು ಜಾತಿಯತೆ ತಾಂಡವವಾಡುತ್ತಿದ್ದು, ಭಾರತೀಯರಾದ ನಾವು ಭಾರತ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿ ನಕರಾತ್ಮಕ ಚಿಂತನೆಗಳಿಗೆ ಎಡೆಮಾಡಿಕೊಡದೆ ಎಲ್ಲರು ಪ್ರಗತಿ ಪತದತ್ತ ಸಾಗಬೇಕು ಎಂದರು.

ವಕೀಲ ಸಂಘದ ಅಧ್ಯಕ್ಷ ಮಾಹದೇವ ಸ್ವಾಮಿ ಮಾತನಾಡಿ, ತರೀಕೆರೆ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಇದ್ದು, ತ್ವರಿತವಾಗಿ ವಿಲೇವಾರಿ ಮಾಡಲು ಹೆಚ್ಚುವರಿ ನ್ಯಾಯಾಧೀಶರ ಅವಶ್ಯಕತೆ ಇರುವುದರಿಂದ ನ್ಯಾಯಾಧೀಶರನ್ನು ನೇಮಿಸುವಂತೆ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್‍ಗೆ ಮನವಿ ಮಾಡಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಉಮೇಶ್ ಎಂ.ಅಡಿಗ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಕ್ಷೀದಾರರಿಗೆ ಸರಿಯಾದ ಮಾರ್ಗದರ್ಶನ ನೀಡುವುದರ ಮೂಲಕ ಅವರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಕ್ಕುಗಳನ್ನು ಕೇಳುವವರ ಸಂಖ್ಯೆ ಹೆಚ್ಚಾದಾಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಜನ ಸಾಮಾನ್ಯರಿಗೆ ಕಾನೂನಿನ ಅರಿವು ತಿಳಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವಾರು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ನ್ಯಾಯಾಧೀಶರುಗಳು, ಹಿರಿಯ ವಕೀಲರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News