ವಿವಾಹಿತ ಮಹಿಳೆಯ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-07-27 18:22 GMT

ದಾವಣಗೆರೆ, ಜು.27: ವಿವಾಹಿತ ಮಹಿಳೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.  

ಚನ್ನಗಿರಿ ತಾ. ಕೆರೆಬಿಳಚಿ ಗ್ರಾಮದ ಎನ್.ಅಣ್ಣಪ್ಪ (40) ಶಿಕ್ಷೆಗೆ ಗುರಿಯಾದ ವ್ಯಕ್ತಿ. ತನ್ನದೇ ಊರಿನ ಸವಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಪ್ಪನ ವಿರುದ್ಧದ ಸಾಕ್ಷ್ಯಾಧಾರಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 

ಅಣ್ಣಪ್ಪ ಹಾಗೂ ಸವಿತಾ ಒಂದೇ ಊರಿನವರು. ಸವಿತಾಳ ಮದುವೆಗೆ ಮುಂಚಿನಿಂದಲೂ ಆಕೆಯನ್ನು ಅಣ್ಣಪ್ಪ ಪ್ರೀತಿಸುತ್ತಿದ್ದನು. ನಂತರ ಚನ್ನಗಿರಿ ತಾ. ಚನ್ನೇಶಪುರ(ಮಾಡಾಳು) ಗ್ರಾಮದ ವ್ಯಕ್ತಿ ಜೊತೆಗೆ ಸವಿತಾ ಮದುವೆಯಾಗಿತ್ತು. ಮದುವೆ ನಂತರವೂ ಅಣ್ಣಪ್ಪ, ಸವಿತಾ ಪ್ರೀತಿ ಇದೇ ರೀತಿ ಮುಂದುವರಿದಿರುತ್ತದೆ. ಸವಿತಾ ಹಾಗೂ ಅಣ್ಣಪ್ಪ ಆಗಾಗ ಫೋನ್ ಸಂಪರ್ಕದಲ್ಲೂ ಇರುತ್ತಾರೆ. ಅಣ್ಣಪ್ಪ 1.1.2017ರಂದು ಸಂಜೆ ಸ್ವೀಟ್ ಬಾಕ್ಸ್ ತೆಗೆದುಕೊಂಡು ಚನ್ನಗಿರಿ ತಾ. ಚನ್ನೇಶಪುರ (ಮಾಡಾಳು) ಗ್ರಾಮದ ಸವಿತಾ ಮನೆಯ ಹಿಂದೆ ಹೋಗಿದ್ದ. ಸವಿತಾಳ ಪತಿ ಮನೆಯಲ್ಲಿ ಇಲ್ಲದ್ದನ್ನು ಖಚಿತ ಪಡಿಸಿಕೊಂಡ ಅಣ್ಣಪ್ಪನು ಸವಿತಾಳನ್ನು ಕರೆಸಿಕೊಂಡು ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಮುಂದಾಗಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಸವಿತಾಳ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದ ಎನ್ನಲಾಗಿದೆ.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಚನ್ನಗಿರಿ ವೃತ್ತ ನಿರೀಕ್ಷಕ ಆರ್.ಆರ್.ಪಾಟೀಲ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.  

ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆಂಗಬಾಲಯ್ಯ, ಅಣ್ಣಪ್ಪನಿಗೆ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡವನ್ನು ಕೊಡಲು ತಪ್ಪಿದರೆ ಮತ್ತೆ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣದಲ್ಲಿ 10 ಸಾವಿರ ರೂ.ಗಳನ್ನು ಮೃತಳ ಮಗಳು ಸ್ವಾತಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News