ಮಹಾ ಮಳೆ: ಹಳಿ ತಪ್ಪಿದ ಮುಂಬೈ

Update: 2019-07-27 18:25 GMT

ಮುಂಬೈ: ಬಲಗೊಳ್ಳುತ್ತಿರುವ ಮುಂಗಾರು ಮತ್ತು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಒತ್ತಡ ಕುಸಿದ ಪರಿಣಾಮ ಮುಂಬೈ ನಗರ ಹಾಗೂ ಸುತ್ತಮುತ್ತಲ ಪ್ರದೇಶ ಹಿಂದೆಂದೂ ಕಾಣದ ರೀತಿಯ ಮಳೆ ಕಾಣುತ್ತಿದ್ದು ಇಡೀ ಮುಂಬೈ ನಗರ ಸಾಗರವಾಗಿ ಬದಲಾಗಿದೆ. ಕಳೆದ 24 ಗಂಟೆಗಳಿಂದ ಎಡೆಬಿಡದೆ ಸುರಿಯುತ್ತಿರುವ ತೀವ್ರ ಮಳೆಯಿಂದ ವಿಮಾನ ಯಾನ ರದ್ದುಗೊಂಡಿದ್ದರೆ ರೈಲುಗಳು ಎಲ್ಲೆಂದರಲ್ಲಿ ನಿಂತಿವೆ. ಬಸ್ ಸೇವೆ ಕೂಡಾ ಅತೀಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಜನರು ಅತಂತ್ರರಾಗಿದ್ದಾರೆ. ಮುಂಬೈ ನಗರ ದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದ್ದು ಈ ಮಧ್ಯೆ ಥಾಣೆ ಜಿಲ್ಲೆಯ ವಂಗಿನಿ ಎಂಬಲ್ಲಿ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು ಸಾಗುವ ಹಳಿಯ ಮೇಲೆ ನೀರು ನಿಂತ ಪರಿಣಾಮ ಮುಂದೆ ಚಲಿಸಲಾಗದೆ ನೀರಿನಲ್ಲಿ ಸಿಲಕಿದ ಘಟನೆ ಶನಿವಾರ ನಡೆದಿದೆ. ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸೇನೆಯ ಹೆಲಿಕಾಪ್ಟರ್ ಮತ್ತು ಬೋಟ್‌ಗಳನ್ನು ಬಳಸಿ ರಕ್ಷಿಸುವಂತೆ ಮಹಾರಾಷ್ಟ್ರ ಸರಕಾರ ಭದ್ರತಾ ಪಡೆಯನ್ನು ಕೋರಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಭದ್ರತಾ ಪಡೆ ಸತತ ಐದು ಗಂಟೆಗಳ ಪ್ರಯತ್ನದ ನಂತರ ರೈಲಿನೊಳಗಿದ್ದ 1,050 ಪ್ರಯಾಣಿಕರನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor