ಅನರ್ಹ ಶಾಸಕರ ಬೆನ್ನಿಗೆ ಬಿಜೆಪಿ ನಿಲ್ಲುವುದಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2019-07-28 12:46 GMT

ಹುಬ್ಬಳ್ಳಿ, ಜು.28: ಅನರ್ಹ ಶಾಸಕರ ಬೆನ್ನಿಗೆ ಬಿಜೆಪಿ ನಿಲ್ಲುವುದಿಲ್ಲ. ಪ್ರಜಾಪ್ರಭುತ್ವದ ಉಳಿವಿಗೆ ಬಿಜೆಪಿ ನಿಲ್ಲಲಿದೆ. ಸಭಾಧ್ಯಕ್ಷ ರಮೇಶ್‌ ಕುಮಾರ್ ಆದೇಶಕ್ಕೆ ಸುಪ್ರೀಂಕೊರ್ಟ್ ತಕ್ಕ ಉತ್ತರ ನೀಡಲಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರ ಆದೇಶ ಒಂದು ದುರ್ದೈವ. ಅತೃಪ್ತರು ಖುದ್ದು ಹಾಜರಾಗಿ ರಾಜೀನಾಮೆ ನೀಡಿದಾಗಲೂ ಸಭಾಧ್ಯಕ್ಷರು ಸುಮ್ಮನೇ ಇದ್ದರು. ರಾಜೀನಾಮೆ ಕೊಟ್ಟ ತಿಂಗಳ ಬಳಿಕ ಅನರ್ಹಗೊಳಿಸಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಅವರು ತಿಳಿಸಿದರು.

ಸಭಾಧ್ಯಕ್ಷ ರಮೇಶ್‌ ಕುಮಾರ್ ಒತ್ತಡಕ್ಕೆ ಮಣಿದು ಅತೃಪ್ತ ಶಾಸಕರನ್ನು ಅನರ್ಹ ಮಾಡುದ್ದು ಜಗಜ್ಜಾಹೀರವಾಗಿದೆ. ಖುದ್ದು ರಾಜೀನಾಮೆ ನೀಡಿದಾಗ ಅದನ್ನು ಸ್ವೀಕಾರ ಮಾಡುವುದಷ್ಠೇ ಸಭಾಧ್ಯಕ್ಷರ ಕೆಲಸ. ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು ಸಭಾಧ್ಯಕ್ಷ ರಮೇಶ್‌ ಕುಮಾರ್ ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದರು.

ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಬಹುಮತ ಸಾಬೀತುಪಡಿಸುತ್ತೇವೆ. ರಾಜ್ಯಕ್ಕೆ ಉತ್ತಮ ಸರಕಾರಕ್ಕೆ ನೀಡುತ್ತೇವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇವೆ. ಎಚ್.ಡಿ. ದೇವೇಗೌಡರ ವಿಷಯಾಧಾರಿತ ಬೆಂಬಲದ ಹೇಳಿಕೆ ಗಮನಸಿದ್ದೇನೆ. ಆದರೆ, ಯಾವ ವಿಷಯ ಏನು ಗೊತ್ತಿಲ್ಲ. ಕೆಲವೊಮ್ಮೆ ಸರಕಾರದ ವಿಧೇಯಕಕ್ಕೆ ಬೆಂಬಲ ನೀಡಬಹುದು. ನೀಡಿದರೆ ಖಂಡಿತ ಸ್ವೀಕರಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News