ರಾಜಕಾರಣ ಸಂಪತ್ತು ಕ್ರೋಢೀಕರಿಸುವ ವೃತ್ತಿಯಾಗುತ್ತಿದೆ: ಶಾಸಕ ರಾಜೇಗೌಡ

Update: 2019-07-28 13:40 GMT

ಚಿಕ್ಕಮಗಳೂರು, ಜು.28: ರಾಜಕಾರಣಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಟೀಕೆ, ಟಿಪ್ಪಣಿ, ಪ್ರಶಂಸೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೇ ಹೊರತು ಮಾಧ್ಯಮಗಳ ಮೇಲೆ ದಾಳಿಗೆ ಮುಂದಾಗುವುದು ಸರಿಯಲ್ಲ. ಮಾಧ್ಯಮಗಳ ಮೇಲೆ ಇಂತಹ ದಾಳಿಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಇದು ಖಂಡನೀಯ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಡಿ.ರಾಜೇಗೌಡ ಅಭಿಪ್ರಾಯಿಸಿದ್ದಾರೆ.

ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ರಂಗಾಯಣ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಓರೆಕೋರೆಗಳನ್ನು ಜನರ ಮುಂದಿಡುತ್ತಾ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಮಹತ್ತರವಾದ ಪಾತ್ರ ನಿರ್ವಹಿಸುತ್ತಿವೆ. ದೃಶ್ಯ ಮಾಧ್ಯಮ ಹಾಗೂ ಆಧುನಿಕ ತಂತ್ರಜ್ಞಾನದಿಂದಾಗಿ ಪ್ರಸಕ್ತ ಪತ್ರಿಕಾ ಮಾಧ್ಯಮ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ ದೃಶ್ಯ ಮಾಧ್ಯಮಕ್ಕಿಂತ ಪತ್ರಿಕಾ ಮಾಧ್ಯಮಗಳು ಸಮಾಜದಲ್ಲಿ ಹೆಚ್ಚು ಶಕ್ತಿಶಾಲಿಯಾಗಿವೆ. ಯಾವುದೇ ವಿಚಾರ ಅಥವಾ ಸುದ್ದಿಗಳು ದೃಶ್ಯ ಮಾಧ್ಯಮಗಳಲ್ಲಿ ಬೆಳಗಿನಿಂದ ಸಂಜೆವರೆಗೂ ಬಿತ್ತರವಾದರೂ ಅವುಗಳಿಗೆ ಹೆಚ್ಚು ಆಯುಷ್ಯ ಇರುವುದಿಲ್ಲ. ಆದರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳು ಹೆಚ್ಚು ಜನರನ್ನು ತಲುಪುವುದಲ್ಲದೇ ದಾಖಲೆಯಾಗಿ ಉಳಿದುಕೊಳ್ಳುವ ಸಾರ್ಮರ್ಥ್ಯ ಹೊಂದಿರುತ್ತವೆ ಎಂದು ಶಾಸಕ ರಾಜೇಗೌಡ ಅಭಿಪ್ರಾಯಿಸಿದರು.

ರಾಜಕಾರಣಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಟೀಕೆಗಳಿಂದ ಕುಗ್ಗಬಾರದು, ಪ್ರಶಂಸೆಗಳಿಂದ ಹಿಗ್ಗಲೂಬಾರದು. ಇವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ತಮ್ಮ ಕಾರ್ಯವೈಖರಿಯನ್ನು ಆತ್ಮಾವಲೋಕ ಮಾಡಿಕೊಳ್ಳುವುದರಿಂದ ಉತ್ತಮ ರಾಜಕಾರಣಿಯಾಗಲು ಸಾಧ್ಯ ಎಂದ ಅವರು, ತಾನು ಆರಂಭದಲ್ಲಿ ರಾಜಕಾರಣದ ಧ್ವೇಷಿಯಾಗಿದ್ದೆ. ಇಂತಹ ಸಂದರ್ಭಗಳಲ್ಲಿ ಪತ್ರಿಕೆಗಳೇ ತನ್ನನ್ನು ರಾಜಕಾರಣಕ್ಕೆ ಕಾಲಿಡಲು ಪ್ರೇರೇಪಿಸಿದವು. ಪತ್ರಿಕೆ ಓದುವ ಹವ್ಯಾಸ ಹೊಂದಿದ್ದ ತಾನು ಪತ್ರಿಕೆಗಳ ಪ್ರಕಟವಾಗುತ್ತಿದ್ದ ಸಮಾಜದ ಓರೆಕೋರೆಗಳು, ಜನರ ಸಮಸ್ಯೆಗಳನ್ನು ಓದುತ್ತಿದ್ದಾಗ ರಾಜಕಾರಣಿಗಳ ಬಗ್ಗೆ ಅಸಡ್ಡೆಯ ಭಾವನೆ ಮೂಡುತ್ತಿತ್ತು. ಕ್ರಮೇಣ ಇಂತಹ ಸಮಸ್ಯೆಗಳಿಗೆ ಕಿಂಚಿತ್ತಾದರೂ ಸ್ಪಂದಿಸುವ ಉದ್ದೇಶದಿಂದ ರಾಜಕಾರಣದ ಹಾದಿ ತುಳಿದೆ. ಜಿಲ್ಲಾ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಪತ್ರಿಕೆಗಳಲ್ಲಿ ಬರುತ್ತಿದ್ದ ಜನರ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸಿದ್ದೇನೆ. ಈ ಕಾರಣದಿಂದಾಗಿಯೇ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅನ್ನು ಅಭಿವೃದ್ಧಿಯಲ್ಲಿ ಎರಡನೇ ಸ್ಥಾನಗಳಿಸುವಂತಾಯಿತು ಎಂದರು.

ಹಿಂದೆ ರಾಜಕಾರಣ ಎಂಬುದು ಸೇವಾ ಕ್ಷೇತ್ರವಾಗಿತ್ತು. ಆ ಸಂದರ್ಭಗಳಲ್ಲಿ ರಾಜಕಾರಣದಲ್ಲಿ ಸಮಾಜ ಸೇವೆ ಮಾಡುವವರಿಗೆ ಆದ್ಯತೆ ಇತ್ತು. ಆದರೆ ಪ್ರಸಕ್ತ ಭ್ರಷ್ಟಾಚಾರಿಗಳಿಗೆ, ಲಜ್ಜೆಗೇಡಿಗಳಿಗೆ ಮಾತ್ರ ರಾಜಕಾರಣ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ರಾಜಕಾರಣ ಎಂಬುದು ಈಗ ಹಣ ಮಾಡುವ, ಸಂಪತ್ತು ಕ್ರೋಢೀಕರಿಸುವ ವೃತ್ತಿಯಾಗಿ ಬದಲಾಗಿದೆ. ಹಣಕ್ಕಾಗಿ, ಅಧಿಕಾರಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುವ ರಾಜಕಾರಣಿಗಳು ತಮ್ಮನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಿದ ಮತದಾರರಿಗೆ ದ್ರೋಹ ಬಗೆಯುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪತ್ರಿಕೆಗಳು ಇಂತಹ ರಾಜಕಾರಣಿಗಳ, ಲಜ್ಜೆಗೇಡಿಗಳ ವಿರುದ್ಧ ಬರೆಯಬೇಕು, ಟೀಕಿಸಬೇಕೆಂದು ಶಾಸಕ ರಾಜೇಗೌಡ ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ವಾಗ್ಮಿ ಹಾಗೂ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಸಮಾಜದಲ್ಲಿ ಜನರು ಹೇಗೆ ಬದುಕಬೇಕೆಂಬುದನ್ನು ಸಂವಿಧಾನ ತಿಳಿಸುತ್ತದೆ, ಕಲಿಸುತ್ತಿದೆ. ಆದರೆ ಮಾಧ್ಯಮರಂಗ ಸಂವಿಧಾನಕ್ಕೇ ಸಂವಿಧಾನವಾಗಿದೆ. ಪ್ರಜೆಗಳ ಧ್ವನಿ ಪ್ರಜಾಪ್ರತಿನಿಧಿಗಳ ಮಧ್ಯೆ ಪ್ರತಿಧ್ವನಿಸುವಂತೆ ಮಾಡುವ ಶಕ್ತಿ ಮಾಧ್ಯಮ ರಂಗವಾಗಿದೆ. ಪತ್ರಿಕೆ ಹಾಗೂ ಪತ್ರಕರ್ತ ಸಮಾಜದ ಕನ್ನಡಿ ಇದ್ದಂತೆ, ಸಮಾಜದಲ್ಲಿ ತನ್ನ ಪಾತ್ರ ಏನೆಂದು ಪ್ರತಿಯೊಬ್ಬರಿಗೂ ತಿಳಿ ಹೇಳುವ ಕೆಲಸ ಮಾಡುತ್ತಿರುವುದೇ ಪತ್ರಿಕಾ ಮಾಧ್ಯಮ ಎಂದು ಅಭಿಪ್ರಾಯಿಸಿದ ಅವರು, ಮಾಧ್ಯಮರಂಗ ಪ್ರಜಾಪ್ರಭುತ್ವದ ಕಾವಲುಗಾರ. ಮಾಧ್ಯಮಗಳು ಯಾವಾಗಲೂ ಶುದ್ಧಿಯಾದ ಸುದ್ದಿಗಳನ್ನು ಮಾತ್ರ ಪ್ರಕಟಿಸಿಬೇಕು. ಇದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಯಾವಾಗಲೂ ಸಮಾಜ ಹಾಗೂ ಜನರ ಸಮಸ್ಯೆಗಳನ್ನು ಗುರುತಿಸುವಲ್ಲಿ ಮುಂದಿರುತ್ತಾರೆ. ಆದರೆ ಪತ್ರಕರ್ತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದಿರುತ್ತಾರೆ. ಪ್ರಸಕ್ತ ಪತ್ರಕರ್ತರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದ್ದಾರೆ. ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿಯಾದರೂ ಸಂಘಟಿತರಾಗುವುದು ಅತ್ಯಗತ್ಯ ಎಂದ ಅವರು, ಸರಕಾರ ಹಾಗೂ ರಾಜಕಾರಣಿಗಳು ಪತ್ರಕರ್ತರನ್ನು ನಿರ್ಲಕ್ಷ್ಯ ವಹಿಸಿದ್ದಾರೆ. ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರ ಬಗ್ಗೆ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯೇ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದನ್ನು ಪತ್ರಕರ್ತರು ಖಂಡಿಸಬೇಕು ಎಂದರು.

ಮಾಧ್ಯಮ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೂಡಿಗೆರೆ, ತರೀಕೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಚಿಕ್ಕಮಗಳೂರು ತಾಲೂಕುಗಳ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. 

ಜಿಲ್ಲೆಯ ಗ್ರಾಮೀಣ ಭಾಗದ ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರ ಸಮಸ್ಯೆಗಳ ಬಗ್ಗೆ ಹಿಂದೆ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇನೆ, ಮುಂದೆಯೂ ಧ್ವನಿಯಾಗಿರುತ್ತೇನೆ. ಜಿಲ್ಲೆಯ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾನು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇನೆ.
- ಟಿ.ಡಿ.ರಾಜೇಗೌಡ, ಶಾಸಕ 

ಪತ್ರಿಕಾ ದಿನಾಚರಣೆಗಳು ಪತ್ರಕರ್ತರ ಸಮಸ್ಯೆಗಳ ಬಗ್ಗೆ ಚರ್ಚಿಸುವ ವೇದಿಕೆಯಾಗಬೇಕು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಜಿಲ್ಲೆಯ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸರಕಾರಗಳು ಗ್ರಾಮೀಣ ಪತ್ರಕರ್ತರ ಬಗ್ಗೆ ನಿರ್ಲಕ್ಷ್ಯವಹಿಸದೇ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಗ್ರಾಮೀಣ ಪತ್ರಕರ್ತರಿಗೂ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಪತ್ರಕರ್ತರು ಸರಕಾರಿ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಡಬೇಕು.
- ಜಿ.ಎಂ.ರಾಜಶೇಖರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News