ಸ್ಪೀಕರ್ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ: ಬಿ.ಸಿ.ಪಾಟೀಲ್

Update: 2019-07-28 14:25 GMT

ಬೆಂಗಳೂರು, ಜು.28: ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸಿ ನಮ್ಮನ್ನು ಅನರ್ಹ ಮಾಡಿದ್ದಾರೆ ಎಂದು ಅನರ್ಹಗೊಂಡಿರುವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಲ್ಲಿಸಿದ ಶಾಸಕರು ಸದನಕ್ಕೆ ಹಾಜರಾಗಲು ಒತ್ತಡ ಹೇರುವಂತಿಲ್ಲ. ಜೊತೆಗೆ ಕಲಾಪ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು ಅವರ ಇಚ್ಛೆಗೆ ಬಿಟ್ಟ ವಿಚಾರವೆಂದು ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ, ವಿಪ್ ಜಾರಿಯೂ ಮಾಡುವಂತಿಲ್ಲ ಎಂಬುದು ಆ ಆದೇಶದ ಅರ್ಥವಾಗಿತ್ತು. ಆದರೆ, ವಿಪ್ ನಿಯಮ ಉಲ್ಲಂಘಿಸಿದ ಕಾರಣವನ್ನೇ ಇಟ್ಟುಕೊಂಡು ಉದ್ದೇಶ ಪೂರಕವಾಗಿ ಅನರ್ಹ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಬೆಂಬಲಿಸುತ್ತಿರುವ ಎಲ್ಲ ಶಾಸಕರಿಗೂ ಒಂದು ಗತಿ ಕಾಣಿಸುವುದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೊದಲಿನಿಂದಲೂ ಹೇಳುತ್ತಿದ್ದರು. ಅದರಂತೆ ಇದೀಗ, ಸಭಾಧ್ಯಕ್ಷರನ್ನು ಬಳಸಿಕೊಂಡು ಸ್ವಾರ್ಥ ರಾಜಕಾರಣ ಮಾಡಿದ್ದಾರೆ ಎಂದು ದೂರಿದರು.

ಈ ಹಿಂದೆ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕರಿಸಿದ್ದ ಸ್ಪೀಕರ್, ನಮ್ಮ ರಾಜೀನಾಮೆ ಏಕೆ ಅಂಗೀಕರಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಶ್ರೀಮಂತ ಪಾಟೀಲ ವಿರುದ್ಧ ದೂರು ನೀಡಿರುವ ಕಾಂಗ್ರೆಸ್ ನಾಯಕರು, ಆಸ್ಪತ್ರೆಗೆ ದಾಖಲಾಗಿದ್ದ ಇನ್ನೊಬ್ಬ ಶಾಸಕ ಬಿ.ನಾಗೇಂದ್ರನ ವಿರುದ್ಧ ಏಕೆ ದೂರು ನೀಡಲಿಲ್ಲ ಎಂದು ಪಾಟೀಲ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News