ಶಾಸಕನಾದ ನನ್ನನ್ನು ವ್ಯವಸ್ಥೆಯು ಶೋಷಿಸಿ, ಅಪಮಾನಿಸಿತು: ಎಚ್.ವಿಶ್ವನಾಥ್

Update: 2019-07-28 15:08 GMT

ಬೆಂಗಳೂರು, ಜು.28: ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ ಎಂದು ಹುಣಸೂರು ವಿಧಾನಸಭಾ ಕ್ಷೇತ್ರದ ಮತದಾರರನ್ನು ಕುರಿತು ಮಾಜಿ ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ದಯಪಾಲಿಸಿದ ಮತಗಳಿಗೂ ಅಪಚಾರ ಮಾಡಿಲ್ಲ. ನಿಮ್ಮ ಪ್ರತೀ ಮತಕ್ಕಾಗಿ ನಿಮಗೆ ಸದಾ ಋಣಿಯಾಗಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ದಯಪಾಲಿಸಿದ ಮತಗಳಿಗೂ ಅಪಚಾರ ಮಾಡಿಲ್ಲ. ನಿಮ್ಮ ಪ್ರತೀ ಮತಕ್ಕಾಗಿ ನಿಮಗೆ ಸದಾ ಋಣಿಯಾಗಿದ್ದೇನೆ, ತಲೆ ಬಾಗಿದ್ದೇನೆ ಎಂದು ಹೇಳಿದ್ದಾರೆ.

ನಿಮ್ಮ ಮತದ ಬಲದಿಂದ ಶಾಸಕನಾದ ನನ್ನನ್ನು ಈ ವ್ಯವಸ್ಥೆ ಶೋಷಿಸಿತು, ಅಪಮಾನಿಸಿತು, ಕಡೆಗಣಿಸಿತು. ಅನುಭವ, ಪ್ರಾಮಾಣಿಕತೆ ಮತ್ತು ಹಿರಿತನಕ್ಕೆ ಬೆಲೆಯಿಲ್ಲದಂತಾಯಿತು. ಒಟ್ಟಾರೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಅನೇಕ ಘಟನೆಗಳು ನಡೆದುಹೋದವು. ಇವುಗಳನ್ನು ಸಹಿಸಲಾರದೆ ನಾನು ಮತ್ತು ನನ್ನಂತೆ ನೋವುಂಡ ಇತರ ಶಾಸಕ ಮಿತ್ರರು ತಮ್ಮಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ನಡೆ ಮತದಾರರಿಗೆ ನಾನು ತೋರಿದ ನಿರ್ಲಕ್ಷವೆಂದು ತಾವು ಭಾವಿಸಬಾರದು ಎಂದು ಮನವಿ ಮಾಡಿದ್ದಾರೆ.

ಬದಲಾಗಿ ನೀವು ಮತ ಕೊಟ್ಟು ಹರಸಿದ ನಮ್ಮ ಶಾಸಕ ಪದೇ ಪದೇ ಆದ ಅವಮಾನಗಳನ್ನು, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ಕೊಟ್ಟ ರಾಜೀನಾಮೆ ಎಂದು ತಾವು ತಿಳಿಯಬೇಕು. ಇದಾದ ಮೇಲೂ ಈ ದ್ವೇಷಪೂರಿತ ವ್ಯವಸ್ಥೆ ನಮ್ಮನ್ನು ದಮನಿಸಲು ಯತ್ನಿಸಿದೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ನಮ್ಮ ರಾಜಕೀಯ ಮತ್ತು ಸಾರ್ವಜನಿಕ ಬದುಕನ್ನು ಮುಗಿಸುವ ಹುನ್ನಾರಗಳನ್ನು ನಡೆಸಿದೆ. ಈಗ ನಾವು ದೇಶದ ಸುಪ್ರೀಂ ಕೋರ್ಟ್ ಬಾಗಿಲನ್ನು ತಟ್ಟುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಿಮ್ಮನ್ನು ಸದ್ಯದಲ್ಲೇ ಹುಣಸೂರಿನಲ್ಲಿ ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ, ವಾಸ್ತವ ಸಂಗತಿಗಳನ್ನು ತಿಳಿಸಲ್ಲಿದ್ದೇನೆ. ದಯವಿಟ್ಟು ತಾವು ನನ್ನನ್ನು, ನನ್ನ ಜೀವನವನ್ನು ಬಲ್ಲವರಾಗಿದ್ದರಿಂದ ವದಂತಿಗಳಿಗೆ ದಯವಿಟ್ಟು ಕಿವಿಗೊಡಬೇಡಿ ಎಂದು ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News