ವರ್ಷದೊಳಗೆ ಮಧ್ಯಂತರ ಚುನಾವಣೆ: ಸತೀಶ್ ಜಾರಕಿಹೊಳಿ

Update: 2019-07-28 15:40 GMT

ಬೆಳಗಾವಿ, ಜು.28: ರಾಜ್ಯದಲ್ಲಿ ವರ್ಷದೊಳಗೆ ಯಾವಾಗ ಬೇಕಾದರೂ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಿಸಿದ್ದಾರೆ.

ರವಿವಾರ ಅಥಣಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಆ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರು ಅನರ್ಹಗೊಂಡಿದ್ದಾರೆ. ಹೀಗಾಗಿ, ಇಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಉಪ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಪಕ್ಷದ ಟಿಕೆಟ್‌ಗೆ ಬಹಳ ಬೇಡಿಕೆ ಇದೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಲಾಗುವುದು. ಹೈಕಮಾಂಡ್ ಅಂತಿಮ ನಿರ್ಧಾರ ಮಾಡುತ್ತದೆ ಎಂದು ಪ್ರತಿಕ್ರಿಯಿಸಿದರು.

ಈಗ ಅನರ್ಹಗೊಂಡಿರುವ ಅತೃಪ್ತ ಶಾಸಕರಲ್ಲಿ ಒಟ್ಟು 4 ಗುಂಪುಗಳಿವೆ. ರಮೇಶ ಜಾರಕಿಹೊಳಿ, ಬೆಂಗಳೂರಿನವರು, ಜೆಡಿಎಸ್‌ನವರು ಹಾಗೂ ಶಾಸಕ ನಾಗೇಂದ್ರ ಬೆಂಬಲಿಗರ ಗುಂಪುಗಳು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಸ್ಥಿರಗೊಳ್ಳಲು ರಮೇಶ ಜಾರಕಿಹೊಳಿ ಕಾರಣ.

-ಸತೀಶ್ ಜಾರಕಿಹೊಳಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News