ಮರ್ಯಾದಾ ಹತ್ಯೆ, ಗುಂಪಿನಿಂದ ದಾಳಿಗಳ ವಿರುದ್ಧ ರಾಜಸ್ಥಾನ ವಿಧಾನಸಭೆಯಲ್ಲಿ ಮಸೂದೆಗಳ ಮಂಡನೆ

Update: 2019-07-30 14:22 GMT

ಜೈಪುರ,ಜು.30: ರಾಜ್ಯದಲ್ಲಿ ಮರ್ಯಾದಾ ಹತ್ಯೆಗಳು ಮತ್ತು ಗುಂಪಿನಿಂದ ಹಲ್ಲೆ-ಹತ್ಯೆ ಘಟನೆಗಳಿಗೆ ಕಡಿವಾಣ ಹಾಕಲು ಉದ್ದೇಶಿಸಿರುವ ಎರಡು ಮಸೂದೆಗಳನ್ನು ರಾಜಸ್ಥಾನದ ಸಂಸ ದೀಯ ವ್ಯವಹಾರಗಳ ಸಚಿವ ಶಾಂತಿಕುಮಾರ ಧಾರಿವಾಲ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಕುಟುಂಬ, ಜಾತಿ ಅಥವಾ ಸಮುದಾಯದ ಗೌರವವನ್ನು ಎತ್ತಿ ಹಿಡಿಯುವ ಹೆಸರಿನಲ್ಲಿ ಇಬ್ಬರು ವಯಸ್ಕರ ನಡುವೆ ಪರಸ್ಪರ ಒಪ್ಪಿಗೆಯ ಮೇರೆಗೆ ಸಗೋತ್ರ ವಿವಾಹಗಳು,ಅಂತರ್-ಜಾತೀಯ,ಅಂತರ್-ಸಮುದಾಯ ಮತ್ತು ಅಂತರ್-ಧರ್ಮೀಯ ವಿವಾಹಗಳ ವಿರುದ್ಧ ಒತ್ತಡವನ್ನು ಹೇರಲು ಸ್ವಘೋಷಿತ ಗುಂಪುಗಳಿಂದ ಕಾನೂನು ಬಾಹಿರ ಬೆದರಿಕೆ ಘಟನೆಗಳು ಹೆಚ್ಚುತ್ತಿವೆ. ಇಂತಹ ಬೆದರಿಕೆಗಳು ಅಥವಾ ಹಿಂಸಾತ್ಮಕ ಕೃತ್ಯಗಳು ಐಪಿಸಿಯಡಿ ಅಪರಾಧವಾಗಿವೆಯಾದರೂ ಹೀಗೆ ಬೆದರಿಕೆಯೊಡ್ಡುವ ಗುಂಪುಗಳನ್ನು ತಡೆಯಲು ಮತ್ತು ಇಂತಹ ಕೃತ್ಯಗಳಿಗೆ ಕಠಿಣ ದಂಡನೆಯಾಗುವಂತೆ ಮಾಡುವುದು ಅಗತ್ಯವಾಗಿದೆ ಎಂದು ಮರ್ಯಾದಾ ಹತ್ಯೆಗಳ ವಿರುದ್ಧದ ಮಸೂದೆಯಲ್ಲಿ ಹೇಳಲಾಗಿದೆ.

ಗುಂಪಿನಿಂದ ಹಲ್ಲೆ-ಹತ್ಯೆ ವಿರುದ್ಧದ ಮಸೂದೆಯಲ್ಲಿ ಇಂತಹ ಶಾಸನವನ್ನು ರೂಪಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಾಡಿರುವ ಶಿಫಾರಸನ್ನು ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜು.16ರಂದು ರಾಜ್ಯ ಮುಂಗಡಪತ್ರದ ಮೇಲಿನ ಚರ್ಚೆಗೆ ಉತ್ತರದಲ್ಲಿ ಇವೆರಡು ಕಾನೂನುಗಳನ್ನು ತರುವುದಾಗಿ ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News