ಯುಎಪಿಎ ಎಂಬ ಕರಾಳ ಶಾಸನ

Update: 2019-07-31 07:25 GMT

ಪ್ರಭುತ್ವ ನಿರಂಕುಶವಾದಾಗ ಅದು ಪ್ರಶ್ನೆಗಳನ್ನು, ಪ್ರತಿರೋಧಗಳನ್ನು ಸಹಿಸುವುದಿಲ್ಲ. ಜನ ಪ್ರತಿಭಟನೆಗಳಿಗೆ ನಿರಂಕುಶ ಪ್ರಭುತ್ವದಲ್ಲಿ ಅವಕಾಶವೇ ಇರುವುದಿಲ್ಲ. ಭಾರತದಲ್ಲಿ ಈಗ ಅಂತಹ ಸನ್ನಿವೇಶ ನಿರ್ಮಾಣವಾಗಿದೆ. ಹೆಸರಿಗೆ ಇಲ್ಲಿ ಪ್ರಜಾಪ್ರಭುತ್ವ ಇದ್ದರೂ ಅದು ಪ್ರಜೆಗಳ ಪ್ರಭುತ್ವವಾಗಿ ಉಳಿದಿಲ್ಲ. ಕೆಲವೇ ಕೆಲವು ಉಳ್ಳವರ ಕೈಗೊಂಬೆಗಳ ಪ್ರಭುತ್ವವಾಗಿದೆ. ಇಂತಹ ಪ್ರಭುತ್ವ ಜನ ಚಳವಳಿಗಳನ್ನು ಸಹಿಸುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಉದಾಹರಣೆಯೆಂದರೆ ಕಾನೂನು ಬಾಹಿರ (ತಡೆ) ಕಾಯ್ದೆಗೆ (ಯುಎಪಿಎ) ಇತ್ತೀಚೆಗೆ ಕೆಲವು ತಿದ್ದುಪಡಿಗಳನ್ನು ತರುವ ವಿಧೇಯಕಕ್ಕೆ ಲೋಕಸಭೆ ಅನುಮೋದನೆ ನೀಡಿರುವುದು. 1967ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಾಯ್ದೆಗೆ ಹಿಂದೆ ಮೂರು ಬಾರಿ ಅಂದರೆ 2004, 2008 ಮತ್ತು 2013ರಲ್ಲಿ ಕೆಲವು ತಿದ್ದುಪಡಿಗಳಾಗಿವೆ.

ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಭುತ್ವ ವಿಫಲಗೊಂಡಾಗ ಭುಗಿಲೇಳುವ ಜನಾಕ್ರೋಶವನ್ನು ಹತ್ತಿಕ್ಕಲು ಆಳುವವರ್ಗ ಇಂತಹ ಕರಾಳ ಶಾಸನಗಳ ಮೊರೆ ಹೋಗುತ್ತದೆ. ಈಗ ಇದರ ಉದ್ದೇಶ ಭಯೋತ್ಪಾದನೆಯನ್ನು ತಡೆಯುವುದಾಗಿರುವುದೇನೊ ನಿಜ. ಉದ್ದೇಶ ಒಳ್ಳೆಯದಾಗಿದೆ, ಆದರೆ ಒಳಗಿನ ಉದ್ದೇಶ ಅಪಾಯಕಾರಿಯಾಗಿದೆ. ಇದು ಇಡೀ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಇದು ಸಂಶಯ ಬರುವ ಯಾವುದೇ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡುತ್ತದೆ. ಇದುವರೆಗೆ ಸಂಶಯ ಬರುವ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಎಂದು ಘೋಷಿಸುವ ಅವಕಾಶವಿತ್ತು. ಈಗ ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರ ಸರಕಾರಕ್ಕೆ ದೊರಕಿದೆ.

ಉದ್ದೇಶಿತ ತಿದ್ದುಪಡಿಯು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಅನುಮತಿ ಪಡೆಯದೆ ಯಾವುದೇ ರಾಜ್ಯದೊಳಗೆ ನುಗ್ಗಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ( ಎನ್‌ಐಎ) ನೀಡುತ್ತದೆ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾದ ತಿದ್ದುಪಡಿಯಾಗಿದೆ.

ಈ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೇಲೆ ಇತ್ತೀಚೆಗೆ ಅನೇಕ ಆರೋಪಗಳು ಕೇಳಿ ಬರುತ್ತಿವೆ. ರಾಜಕೀಯ ದ್ವೇಷ ಸಾಧನೆಗಾಗಿ ಇದು ಬಳಕೆಯಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಅಂತಲೇ ಈ ವಿಧೇಯಕಕ್ಕೆ ಸಂಸತ್ತಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಜನವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿದೆ.

ಭದ್ರತಾ ಸಂಸ್ಥೆಗಳಿಂದ ವ್ಯಕ್ತಿಯೊಬ್ಬನನ್ನು ‘ಭಯೋತ್ಪಾದಕ’ ಎಂದು ಘೋಷಿಸುವಂತೆ ಮನವಿ ಬಂದರೆ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಪರಾಮರ್ಶೆ ಮಾಡಿ ಅಂತಹ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸುತ್ತದೆ. ಇದು ನ್ಯಾಯಾಲಯದ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ನ್ಯಾಯಾಲಯಗಳು ಒಬ್ಬ ವ್ಯಕ್ತಿಯನ್ನು ದೋಷಿ ಅಥವಾ ಭಯೋತ್ಪಾದಕ ಎಂದು ವಿಚಾರಣೆ ನಡೆಸಿ ತೀರ್ಮಾನ ಮಾಡುವ ಮೊದಲೇ ಕೇಂದ್ರ ಸರಕಾರದ ಸಚಿವಾಲಯವೊಂದರ ಅಧಿಕಾರಿಗಳು ಆತನನ್ನು ಭಯೋತ್ಪಾದಕ ಎಂದು ಘೋಷಿಸಲು ಈ ತಿದ್ದುಪಡಿ ಅವಕಾಶ ನೀಡುತ್ತದೆ. ಮುಂದೆ ಇದು ನ್ಯಾಯಾಲಯಕ್ಕೆ ಹೋದರೆ ಅಸಿಂಧುವಾಗಬಹುದು. ಅದೇನೇ ಇರಲಿ ಇದು ಅತ್ಯಂತ ಅಪಾಯಕಾರಿ ಶಾಸನವಾಗಿದೆ. ಅದರಲ್ಲೂ ಈ ತಿದ್ದುಪಡಿ ಇನ್ನೂ ಗಂಡಾಂತರಕಾರಿಯಾಗಿದೆ

ಮಾನವ ಹಕ್ಕು ಹೋರಾಟಗಾರರನ್ನು ಕಂಡರೆ ಈ ಸರಕಾರಕ್ಕೆ ಆಗುವುದಿಲ್ಲ, ಸಂಘಪರಿವಾರದ ಸಿದ್ಧಾಂತವನ್ನು ವಿರೋಧಿಸುವವರನ್ನೆಲ್ಲ ಹತ್ತಿಕ್ಕಲು ಈ ಶಾಸನ ದುರುಪಯೋಗವಾಗುವ ಅಪಾಯವಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೆಲ ಚಿಂತಕರನ್ನು ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ತಳ್ಳಲಾಗಿದೆ. ನಾಳೆ ಅಂಥವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಹತ್ತಿಕ್ಕುವ ಅಪಾಯವಿದೆ. ಮೋದಿ ಸರಕಾರವನ್ನು ವಿರೋಧಿಸಿ ಹೋರಾಡುವವರನ್ನೆಲ್ಲ ಭಯೋತ್ಪಾದಕರೆಂದು ಕರೆದು ದಮನ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತದೆ. ಪರಿಸ್ಥಿತಿ ಎಷ್ಟು ಅಪಾಯಕಾರಿಯಾಗಿದೆ ಎಂದರೆ ಇಂತಹ ಕರಾಳ ಶಾಸನವನ್ನು ವಿರೋಧಿಸಿ ಧ್ವನಿ ಎತ್ತಿದರೆ ಅಂತಹವರನ್ನು ದೇಶದ್ರೋಹಿಗಳೆಂದು ಸಾಮಾಜಿಕ ಜಾಲ ತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತದೆ.

ಯಾವುದೇ ಕಾನೂನುಬದ್ಧ ಪ್ರಕ್ರಿಯೆ ನಡೆಸದೆ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ಕೇಂದ್ರದ ಸಚಿವಾಲಯವೊಂದಕ್ಕೆ ನೀಡುವುದು ಸಹಜ ನ್ಯಾಯಕ್ಕೆ ವಿರೋಧವಾಗಿದೆ.
ಈ ತಿದ್ದುಪಡಿಯ ಇನ್ನೊಂದು ಹಾಸ್ಯಾಸ್ಪದ ಸಂಗತಿಯೆಂದರೆ ಯಾವುದೇ ವ್ಯಕ್ತಿ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಲ್ಲಿ ಅದನ್ನು ಪ್ರಶ್ನಿಸಿ ಆತ ಗೃಹ ಇಲಾಖೆಗೆ ಮನವಿ ಸಲ್ಲಿಸಬಹುದು. ಇಂತಹ ವ್ಯಕ್ತಿಯಿಂದ ಮನವಿ ಬಂದಲ್ಲಿ ಅದನ್ನು ಸಚಿವಾಲಯ 45 ದಿನಗಳಲ್ಲಿ ಇತ್ಯರ್ಥ ಪಡಿಸಬೇಕು ಎಂಬ ಅಂಶವೇನೋ ಈ ತಿದ್ದುಪಡಿ ವಿಧೇಯಕದಲ್ಲಿದೆ.ಆದರೆ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿದ ಸಚಿವಾಲಯವೇ ನಾನು ಭಯೋತ್ಪಾದಕ ಅಲ್ಲ ಎಂದು ಸಲ್ಲಿಸುವ ಅರ್ಜಿಯನ್ನು ಪರಿಶೀಲನೆ ಮಾಡಬೇಕೆಂಬುದು ಅಪಹಾಸ್ಯಕರವಲ್ಲದೆ ಬೇರೇನೂ ಅಲ್ಲ. ಈ ಮನವಿಯ ಪರಿಶೀಲನೆಗೆ ಮೇಲ್ಮನವಿ ಪ್ರಾಧಿಕಾರವೊಂದನ್ನು ಮಾಡಬೇಕಾಗಿತ್ತು. ಭಯೋತ್ಪಾದಕ ಎಂದು ಘೋಷಿಸುವ ಸಚಿವಾಲಯದ ತೀರ್ಮಾನದ ಬಗ್ಗೆ ಆಕ್ಷೇಪವಿದ್ದರೆ ಅಂತಹ ವ್ಯಕ್ತಿ ಹೈಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಇರುವ ತ್ರಿಸದಸ್ಯ ಸಮಿತಿಯ ಎದುರು ಮನವಿ ಸಲ್ಲಿಸಬಹುದು. ಆದರೆ ಆ ಸಮಿತಿಯನ್ನು ನೇಮಕ ಮಾಡುವ ಅಧಿಕಾರವನ್ನು ಕೂಡ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಲಾಗಿದೆ. ಈ ವಿಧೇಯಕದಲ್ಲಿನ ಇಂತಹ ವಿವಾದಾತ್ಮಕ ಅಂಶಗಳು ಸಹಜ ನ್ಯಾಯದ ತತ್ವಗಳಿಗೆ ವಿರೋಧವಾಗಿವೆ.

ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಘೋಷಿಸು ವಾಗ ಅಧಿಕಾರಿಗಳ ಕಡೆಯಿಂದ ತಪ್ಪಾದಲ್ಲಿ ತಪ್ಪುಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಏನು ಎಂಬುದು ಸ್ಪಷ್ಟವಾಗಿಲ್ಲ. ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿದ ನಂತರ ಆತನನ್ನು ಬಂಧಿಸಲಾಗುವುದೋ ಅಥವಾ ಆತನ ಚಲನವಲನಗಳ ಮೇಲೆ ನಿಗಾ ಇಡಲಾಗುವುದೋ ಎಂಬುದು ಸ್ಪಷ್ಟವಾಗಿಲ್ಲ. ಇಂತಹ ಅನೇಕ ಲೋಪ ದೋಷಗಳು ವಿಧೇಯಕದಲ್ಲಿವೆ. ಯಾವುದೇ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ತಪ್ಪಾಗಿ ಘೋಷಿಸಿದಲ್ಲಿ ಆ ವ್ಯಕ್ತಿ ನಾಗರಿಕ ಸಮಾಜದಲ್ಲಿ ತಲೆ ಎತ್ತಿ ತಿರುಗಲು ಸಾಧ್ಯವಿಲ್ಲ. ಆತ ಜೀವನೋಪಾಯದ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಆತನ ಕುಟುಂಬ ಸಮಾಜದಲ್ಲಿ ಬಹಿಷ್ಕೃತರಂತೆ ಬದುಕಬೇಕಾಗುತ್ತದೆ. ಮುಂದೊಂದು ದಿನ ಆತ ಭಯೋತ್ಪಾದಕ ಅಲ್ಲ ಎಂದು ಸಾಬೀತಾದರೆ ಆ ವ್ಯಕ್ತಿಗೆ ಅಂಟಿದ ಕಳಂಕ ಸುಲಭಕ್ಕೆ ಅಳಿಸಿ ಹೋಗುವುದಿಲ್ಲ. ಆದ್ದರಿಂದ ಈ ತಿದ್ದುಪಡಿ ವಿಧೇಯಕ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿದೆ. ಸರಕಾರ ಇದನ್ನು ವಾಪಸ್ ಪಡೆಯುವ ಬಗ್ಗೆ ಮರು ಪರಿಶೀಲನೆ ಮಾಡಬೇಕು. ಇದು ಭಾರತೀಯರೆಲ್ಲರ ಒಕ್ಕೊರಲಿನ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News