ದ್ವೇಷ ರಾಜಕಾರಣಕ್ಕೆ ಟಿಪ್ಪು ಜಯಂತಿ ರದ್ದು: ಕೊಡಗು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪ

Update: 2019-07-31 12:48 GMT
ಎ.ಕೆ.ಹಾರಿಸ್

ಮಡಿಕೇರಿ, ಜು.31: ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಿಜೆಪಿ ನೇತೃತ್ವದ ಸರಕಾರ ಜನಪರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ತೋರದೆ ಅಧಿಕಾರಕ್ಕೆ ಬಂದ ತಕ್ಷಣ ಟಿಪ್ಪು ಸುಲ್ತಾನರ ಜಯಂತಿಯನ್ನು ರದ್ದುಗೊಳಿಸುವ ಮೂಲಕ ದ್ವೇಷ ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ಹಾರಿಸ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕೆ ತನ್ನದೇ ಆದ ರೀತಿಯ ಕೊಡುಗೆಯನ್ನು ನೀಡಿ ಕನ್ನಡನಾಡಿನ ಮನೆ ಮಾತಾಗಿದ್ದ ಟಿಪ್ಪುವಿನ ಜಯಂತಿ ಒಂದು ಅರ್ಥಪೂರ್ಣ ಆಚರಣೆಯಾಗಿದ್ದು, ಇದನ್ನು ಸ್ಥಗಿತಗೊಳಿಸಿರುವ ಬಿಜೆಪಿ ಸರಕಾರ ಆರಂಭದಲ್ಲೇ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ. 

ಸರ್ವ ಜನರನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿವರ್ಷ ಟಿಪ್ಪು ಜಯಂತಿಯನ್ನು ಸರಕಾರದ ಮೂಲಕ ಆಚರಿಸುವ ನಿರ್ಧಾರಕ್ಕೆ ಬಂದರು. ಇದನ್ನು ಅಲ್ಪಸಂಖ್ಯಾತರು ಕೂಡ ಸ್ವಾಗತಿಸಿ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಆಚರಣೆಯಿಂದ ಮಡಿಕೇರಿ ಹೊರತು ಪಡಿಸಿದಂತೆ ಬೇರೆ ಎಲ್ಲೂ ಯಾವುದೇ ರೀತಿಯ ತೊಂದರೆಯಾಗದಿದ್ದರೂ ಬಿಜೆಪಿ ನೇತೃತ್ವದ ಸರಕಾರ ಜಯಂತಿಯನ್ನು ರದ್ದುಗೊಳಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ ಎಂದು ಹಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಮೊಟ್ಟ ಮೊದಲ ರಾಜ ಟಿಪ್ಪು ಎಂಬ ಹೆಗ್ಗಳಿಕೆ ಇದ್ದು, ಇತಿಹಾಸವನ್ನು ತಿರುಚುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡು ಟಿಪ್ಪು ಪರವಾದ ವೇಷ, ಭೂಷಣಗಳನ್ನು ಧರಿಸಿ, ಟಿಪ್ಪುವಿನ ಗುಣಗಾನ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಒಡಕು ಮೂಡಿಸಿ ಟಿಪ್ಪುವನ್ನು ಶತ್ರುವಿನಂತೆ ಪ್ರತಿಬಿಂಬಿಸುತ್ತಿರುವ ಬಿಜೆಪಿಯ ವರ್ತನೆ ಖಂಡನೀಯವೆಂದು ಹಾರೀಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News