ಚಿಕ್ಕಮಗಳೂರು: ಸಿದ್ದಾರ್ಥ ಅಂತಿಮ ದರ್ಶನಕ್ಕೆ ಜನಸಾಗರ- ಮುಗಿಲು ಮುಟ್ಟಿದ ಆಕ್ರಂದನ
ಚಿಕ್ಕಮಗಳೂರು, ಜು.31: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಜಿಲ್ಲೆಯ ಹೆಸರಾಂತ ಉದ್ಯಮಿ ವಿ.ಜಿ.ಸಿದ್ದಾರ್ಥ ಅವರ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ ಮಂಗಳೂರಿನಿಂದ ನಗರಕ್ಕಾಗಮಿಸಿತು. ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಹಾಗೂ ಮಾವ ಎಸ್.ಎಂ.ಕೃಷ್ಣ, ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್ ಸೇರಿದಂತೆ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಜಿಲ್ಲೆ ಹೊರ ಜಿಲ್ಲೆಗಳ ಸಾವಿರಾರು ಜನರು, ಕಾರ್ಮಿಕರು ಅಗಲಿದ ಕಾಫಿ ಉದ್ಯಮದ ಧೀಮಂತ ವ್ಯಕ್ತಿಯ ಅಂತಿಮ ದರ್ಶನ ಪಡೆದು ಅಶ್ರುತರ್ಪಣ ಅರ್ಪಿಸಿದರು.
ಬುಧವಾರ ಮುಂಜಾನೆ ಮಂಗಳೂರಿನ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಸಿದ್ದಾರ್ಥ ಅವರ ಮೃತ ದೇಹ ಪತ್ತೆಯಾದ ಸುದ್ದಿಯನ್ನು ಜಿಲ್ಲೆಯ ಜನರು ಹಾಗೂ ಸಿದ್ದಾರ್ಥ ಕುಟುಂಬದ ಆಪ್ತರು ನಂಬಲಸಾಧ್ಯ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಸಿದ್ದಾರ್ಥ ಅವರ ಮೃತದೇಹ ಪತ್ತೆಯಾಗಿ, ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ತರುವುದು ಖಚಿತವಾಗುತ್ತಿದ್ದಂತೆ ನಗರದ ಕಾಫಿ ಡೇ ಗ್ಲೊಬಲ್ ಲಿಟಿಟೆಡ್ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಂಸ್ಥೆ ವತಿಯಿಂದ ಬೆಳಗ್ಗೆಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅಗತ್ಯವಿದ್ದ ಎಲ್ಲ ಸಿದ್ಧತೆಗಳನ್ನು ಕೈಗೊಂಡರು.
ಸಿದ್ದಾರ್ಥ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ತರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸಿದ್ದಾರ್ಥ ಒಡೆತನದ ಎಲ್ಲ ಉದ್ಯಮ ಸಂಸ್ಥೆಗಳ ಸಿಬ್ಬಂದಿ ಹಾಗೂ ಕಾಫಿ ತೋಟಗಳ ಕಾರ್ಮಿಕರು, ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಕಾಫಿ ಡೇ ಆವರಣದಲ್ಲಿ ಬೆಳಗ್ಗೆಯಿಂದಲೇ ಜಮಾಯಿಸಲಾರಂಭಿಸಿದ್ದರು. ಜಿಲ್ಲಾ ಪೊಲೀಸ್ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ನೂರಾರು ಪೊಲೀಸ್ ಅಧಿಕಾರಿಗಳು, ಪೇದೆಗಳೊಂದಿಗೆ ಸಂಚಾರಿ ವ್ಯವಸ್ಥೆ, ಭದ್ರತೆಯ ಸಿದ್ಧತೆಯನ್ನೂ ಪೂರ್ಣ ಗೊಳಿಸಿದ್ದರು. ಈ ವೇಳೆಗಾಗಲೇ ಕಾಫಿ ಡೇ ಸಂಸ್ಥೆಯ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾಫಿ ಉದ್ಯಮದ ಪ್ರಮುಖರು, ಜಿಲ್ಲೆಯ ರಾಜಕಾರಣಿಗಳು, ಜಮಾಯಿಸಿದ್ದರು, ಪೊಲೀಸರು ಜನರನ್ನು ಹಾಗೂ ವಾಹನ ಧಟ್ಟಣೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇದೇ ವೇಳೆಗ ಸಿದ್ದಾರ್ಥ ಅವರ ತಾಯಿ, ಸಹೋದರಿ ಸೇರಿದಂತೆ ಕುಟುಂಬದ ಆಪ್ತರು ಕಾಫಿ ಡೇ ಆವರಣಕ್ಕಾಗಮಿಸಿ ಸಿದ್ದಾರ್ಥ ಅವರ ಪಾರ್ಥಿವ ಶರೀರ ಬರುವುದನ್ನೇ ಕಾಯುತ್ತಿದ್ದರು. ಈ ವೇಳೆ ಸಿದ್ದಾರ್ಥ ಅವರ ತಾಯಿಯನ್ನು ಸಂಬಂಧಿಕರು, ಆಪ್ತರು ಸಂತೈಸುತ್ತಿದ್ದ ದೃಶ್ಯಗಳು ಮನಕಲುಕುವಂತಿದ್ದವು.
ಮಧ್ಯಾಹ್ನ ಸರಿಯಾಗಿ 2:40ಕ್ಕೆ ಮಂಗಳೂರಿನಿಂದ ಆಂಬ್ಯುಲೆನ್ಸ್ ಮೂಲಕ ಸಿದ್ದಾರ್ಥ ಅವರ ಪಾರ್ಥಿವ ಶರೀರ ಕಾಫಿ ಡೇ ಆವರಣಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು, ವಿವಿಧ ಸಂಸ್ಥೆಗಳ ಸಿಬ್ಬಂದಿ, ಕಾರ್ಮಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ವೇಳೆ ಸಿದ್ದಾರ್ಥ ಅಮರ್ ರಹೇ ಎಂಬ ಘೋಷಣೆಗಳೂ ಕೇಳಿ ಬಂದವು.
ಸಿದ್ದಾರ್ಥ ಅವರ ಶವಪೆಟ್ಟಿಗೆಯನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಿರಿಸಿದ ಬಳಿಕ ಸಿದ್ದಾರ್ಥ ಅವರ ತಾಯಿ ವಾಸಂತಿ, ಪತ್ನಿ ಮಾಳವಿಕ ಮಕ್ಕಳಾದ ಅಮರ್ಥ್ಯ, ಈಶಾನ್ ಹಾಗೂ ಹತ್ತಿರದ ಸಂಬಂಧಿಕರು ಮೊದಲು ದರ್ಶನ ಪಡೆದರು. ನಂತರ ಒಕ್ಕಲಿಗ ಸಮುದಾಯದ ವಿಧಿವಿಧಾನಗಳಂತೆ ಪೂಜೆ ಸಲ್ಲಿಸಿದರು. ಈ ವೇಳೆ ತಾಯಿ, ಪತ್ನಿ, ಮಕ್ಕಳ ಕಣ್ಣುಗಳು ತೇವಗೊಂಡವಾದರೂ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಟ್ಟರು.
ಬಳಿಕ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಮೋಟಮ್ಮ, ಯು.ಟಿ.ಖಾದರ್, ಕಿಮ್ಮನೆ ರತ್ನಾಕರ್, ಬಿಬಿ ನಿಂಗಯ್ಯ, ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಪತ್ರಕರ್ತ ಎಚ್.ಆರ್.ರಂಗನಾಥ್, ಶಾಸಕ ಸಿಟಿ ರವಿ, ಶಾಸಕರಾದ ರಾಜೇಗೌಡ, ಭೋಜೇಗೌಡ, ಧರ್ಮೇಗೌಡ, ಮಾಜಿ ಶಾಸಕ ವಿಶ್ವನಾಥ್ ಸೇರಿದಂತೆ ಜಿಲ್ಲೆಯ ಪ್ರಮುಖರಾದ ಗಾಯತ್ರಿ ಶಾಂತೇಗೌಡ, ಎಚ್.ಎಚ್.ದೇವರಾಜ್, ಡಿ.ಎಲ್.ವಿಜಯ್‍ಕುಮಾರ್, ಎಂ.ಎಲ್.ಮೂರ್ತಿ ಸೇರಿದಂತೆ ಜಿಲ್ಲೆ, ರಾಜ್ಯದ ಪ್ರಮುಖ ಉದ್ಯಮಿಗಳು, ಜಿಲ್ಲೆಯ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸಿದ್ದಾರ್ಥ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಗಣ್ಯರ ಅಂತಿಮ ದರ್ಶನದ ಬಳಿಕ ಸಾರ್ವಜನಿಕರು ಹಾಗೂ ಸಿದ್ದಾರ್ಥ ಒಡೆತನದ ಶೈಕ್ಷಣಿಕ ಸಂಸ್ಥೆಗಳು, ಸೆರಾಯ್ ರೆಸಾರ್ಟ್, ಕಾಫಿ ಡೇ ಕಂಪೆನಿ ಹಾಗೂ ಕಾಫಿ ಬೆಳೆಗಾರರು, ಕಾಫಿ ತೋಟಗಳ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು ಸರತಿ ಸಾಲಿನಲ್ಲಿ ಬಂದು ಸಿದ್ದಾರ್ಥ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ನೂಕುನುಗ್ಗಲು ಉಂಟಾಯಿತಾದರೂ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿದರು. ಅಂತಿಮ ದರ್ಶನಕ್ಕೆ ಜಿಲ್ಲಾದ್ಯಂತ ಜನರ ಸಾವಿರಾರು ವಾಹನಗಳಲ್ಲಿ ಆಗಮಿಸಿದ್ದರಿಂದ ಕಾಫಿ ಡೇ ಎದುರಿನ ಕಡೂರು-ಮಂಗಳೂರು ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ವಾಹನ ಧಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಡಕಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಮುಖ್ಯಮಂತ್ರಿಯಿಂದ ಅಂತಿಮ ದರ್ಶನ
ಸಿದ್ದಾರ್ಥ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾಜ್ಯದ ನೂತನ ಸಿಎಂ ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಅವರು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರೊಂದಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾಫಿ ಡೇ ಆವರಣಕ್ಕೆ ಮಧ್ಯಾಹ್ನ 3ರ ವೇಳೆಗ ಆಗಮಿಸಿದ್ದರು. ಈ ವೇಳೆ ಕಾಫಿ ಡೇ ವರಣದಲ್ಲಿ ಭಾರೀ ಜನಸ್ತೋಮ ಜಮಾಯಿಸಿದ್ದರಿಂದ ಪೊಲೀಸರು ಸಿಎಂ ಅವರನ್ನು ಸ್ಥಳಕ್ಕೆ ಕರೆದೊಯ್ಯಲು ಹರಸಾಹಸ ಪಟ್ಟರು. ಪಾರ್ಥಿವ ಶರೀರದ ಬಳಿ ಆಗಮಿಸಿದ ಅವರು ಸಿದ್ದಾರ್ಥ ಅವರ ಅಂತಿಮ ದರ್ಶನ ಪಡೆದು ಭಾವುಕರಾದರು. ದರ್ಶನದ ಬಳಿಕ ಕೂಡಲೇ ಸ್ಥಳದಿಂದ ತೆರಳಿದ ಅವರು ಬೆಂಗಳೂರಿಗೆ ಹಿಂದಿರುಗಿದರು.
ಕಾಫಿ ಡೇ ಆವರಣದಲ್ಲಿ ಸಿದ್ದಾರ್ಥ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ 5ರವರೆಗೆ ಇರಿಸಲಾಗಿತ್ತು. ಸಂಜೆ 6ಗಂಟೆಯೊಳಗೆ ಅಂತ್ಯಸಂಸ್ಕಾರ ನೆರವೇರಿಸಲು ಸಿದ್ದಾರ್ಥ ಅವರ ಕುಟುಂಬದವರು ಮೊದಲೇ ನಿರ್ದರಿಸಿದ್ದರಿಂದ ಬುಧವಾರ ಸಂಜೆ 5 ಗಂಟೆಯಾಗುತ್ತಿದ್ದಂತೆ ಸಾರ್ವಜನಿಕರ ಅಂತಿಮ ದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಈ ವೇಳೆ ಜಿಲ್ಲೆ ಹಾಗೂ ಹಿರ ಜಿಲ್ಲೆಗಳಿಂದ ಸಾವಿರಾರು ಮಂದಿ ಅಂತಿಮ ದರ್ಶನ್ಕಕಾಗಮಿಸುತ್ತಲೇ ಇದ್ದರಾರದೂ ಅಂತ್ಯಸಂಸ್ಕಾರಕ್ಕಾಗಿ ಸಿದ್ದಾರ್ಥ ಅವರ ಪಾರ್ಥಿವ ಶರೀರವನ್ನು ಮೂಡಿಗೆರೆ ತಾಲೂಕಿನ ಚಟ್ನಳ್ಳಿ ಗ್ರಾಮದ ಚೇತನ ಎಷ್ಟೇಟ್‍ಗೆ ಕೊಂಡೊಯ್ದಿದ್ದರಿಂದಾಗಿ ಕಾಫಿ ಡೇ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿಗೆ ಹಾಗೂ ದೂರದೂರುಗಳಿಂದ ಬರುತ್ತಿದ್ದವರಿಗೆ ಅಂತಿಮ ದರ್ಶನದ ಭಾಗ್ಯ ಸಿಗಲಿಲ್ಲ.