ಸಿದ್ಧಾರ್ಥ ಸಾವು ಪ್ರಕರಣ: ಐಟಿ ಕಿರುಕುಳದ ಬಗ್ಗೆ ತನಿಖೆ ಮಾಡಿ- ಪ್ರಧಾನಿಗೆ ಪತ್ರ
ಬೆಂಗಳೂರು, ಜು.31: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವು ಪ್ರಕರಣ ಸಂಬಂಧ ಆದಾಯ ತೆರಿಗೆ (ಐಟಿ) ಇಲಾಖೆಯ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಪತ್ರ ಬರೆದಿದೆ.
ಬುಧವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಕಾಫಿ ಉದ್ಯಮದ ಪ್ರಗತಿಗೆ ಶ್ರಮಿಸಿರುವ ಸಿದ್ಧಾರ್ಥ ಅವರ ಸಾವಿನ ತನಿಖೆ ನಡೆಯಬೇಕು. ಅದಲ್ಲದೆ, ಅವರು ಬರೆದಿರುವ ಪತ್ರದಲ್ಲಿ ಗಂಭೀರ ಅಂಶಗಳಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಿದ್ಧಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಕರ್ನಾಟಕ, ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್. ಬಾಲಕೃಷ್ಣನ್ ಅವರು ಕಿರುಕುಳ ನೀಡಿದ್ದಾರೆ ಎಂದು ಗೊತ್ತಾಗಿದೆ. ಹಾಗಾಗಿ, ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ, ರಾಜ್ಯ ವ್ಯಾಪ್ತಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.