ರಾಜ್ಯಾದ್ಯಂತ ಖಾಸಗಿ ವೈದ್ಯರ ಮುಷ್ಕರ: ರೋಗಿಗಳ ಪರದಾಟ
ಬೆಂಗಳೂರು, ಜು. 31: ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಮುಷ್ಕರಕ್ಕೆ ಕರೆ ನೀಡಿದ್ದರಿಂದ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಯಿತು.
ರಾಜ್ಯಾದ್ಯಂತ ನೂರಾರು ಸಂಖ್ಯೆಯಲ್ಲಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರ ಪರಿಣಾಮ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಅನೇಕ ಕಡೆಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದಿದ್ದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಜನದಟ್ಟಣೆ ಅಧಿಕವಾಗಿತ್ತು.
ಹೊರರೋಗಿಗಳ ಚಿಕಿತ್ಸಾ ಘಟಕ (ಒಪಿಡಿ) ಮತ್ತು ಕ್ಲಿನಿಕ್‌ಗಳಲ್ಲಿ ಸೇವೆ ಸ್ಥಗಿತಗೊಂಡಿತ್ತು. ತುರ್ತು ಚಿಕಿತ್ಸಾ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸೇವೆಗಳು ಸ್ಥಗಿತಗೊಂಡಿದ್ದವು. ಇದರಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಸಾರ್ವಜನಿಕರು ಪರದಾಡಿದರು. ಹಲವಾರು ಜನರು ಸರಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರಿಂದ ಅಲ್ಲಿಯೂ ಚಿಕಿತ್ಸೆ ಪಡೆಯಲು ದಿನಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿತ್ತು. ಸರಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದರು. ಆದುದರಿಂದಾಗಿ, ಸೂಕ್ತ ರೀತಿಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶಾದ್ಯಂತ ಕರೆನೀಡಿರುವ ಈ ಮುಷ್ಕರದಲ್ಲಿ ಸುಮಾರು 25 ಸಾವಿರ ವೈದ್ಯರು ಪಾಲ್ಗೊಳ್ಳುವ ನಿರೀಕ್ಷೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಕ್ತ ಸೂಚನೆಗಳನ್ನು ನೀಡಿದ್ದರು.
ಮುಷ್ಕರದ ಬಿಸಿ ಔಷಧದ ಅಂಗಡಿಗಳಿಗೆ ತಟ್ಟಿಲ್ಲ. ಎಂದಿನಂತೆ ಔಷಧಿ ಮಳಿಗೆಗಳು ತೆರೆದಿದ್ದು, ಎಲ್ಲಾ ರೀತಿಯ ಔಷಧಿಗಳು ಲಭ್ಯವಿರುವಂತೆ ಅಗತ್ಯಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಹೆಚ್ಚಿನ ರೀತಿಯಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಆಯೋಗದ ಮಸೂದೆ ವಿರೋಧಿಸಿ ಭಾರತೀಯ ವೈದ್ಯ ಸಂಘ ದೇಶಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ದೇಶದ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಸಂಜೆ 6ರವರೆಗೂ ವೈದ್ಯರ ಮುಷ್ಕರ ನಡೆಯಿತು. ಪ್ರಸ್ತುತ ಅಸ್ಥಿರದಲ್ಲಿರುವ ಮೆಡಿಕಲ್ ಕೌನ್ಸಲಿಂಗ್ ಇಂಡಿಯಾ ಬದಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಮಸೂದೆಗೆ ಲೋಕಸಭೆ ಕಳೆದ ಜುಲೈನಲ್ಲೇ ಒಪ್ಪಿಗೆ ನೀಡಿತ್ತು. ಈಗ ಈ ಮಸೂದೆಯನ್ನು ಜಾರಿ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು, ಇದರ ವಿರುದ್ಧ ವೈದ್ಯರು ಪ್ರತಿಭಟನೆ ನಡೆಸಿದರು.