ಸಿದ್ಧಾರ್ಥ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲು ಕಾಂಗ್ರೆಸ್-ಜೆಡಿಎಸ್ ಆಗ್ರಹ

Update: 2019-07-31 17:24 GMT

ಬೆಂಗಳೂರು, ಜು.31: ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥೆಯ ಮುಖ್ಯಸ್ಥ ಸಿದ್ಧಾರ್ಥ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಸಿದ್ಧಾರ್ಥ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ. ಅವರದ್ದು ತುಂಬಾ ಸರಳ ವ್ಯಕ್ತಿತ್ವ, ಸಾವಿರಾರು ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ. ಈ ದಿನ ಆ ನಂದಾದೀಪ ಹಾರಿಹೋದ ಸುದ್ದಿ ಕೇಳಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ದಾರುಣ ಸಾವಿನ ಬಗ್ಗೆ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಸುಮಾರು 35 ವರ್ಷಗಳಿಂದ ನಾನು ಸಿದ್ಧಾರ್ಥ ಅವರನ್ನು ಬಲ್ಲೆ. ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂಧುಗಳಿಗೆ ಅವರ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ತುಂಬಲಿ ಎಂದು ದೇವೇಗೌಡ ಪ್ರಾರ್ಥಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ: ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಸಾವು ಎಷ್ಟು ದಾರುಣವೋ, ಅದರ ಹಿನ್ನೆಲೆ ಅಷ್ಟೇ ನಿಗೂಢವಾದುದು. ಅವರನ್ನು ಇಂತಹದೊಂದು ದುರಂತಕ್ಕೆ ತಳ್ಳಿದ ಕಾರಣಗಳು ಮತ್ತು ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಿದ್ಧಾರ್ಥ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರಬಹುದೆಂಬ ಸಂಶಯ ಹುಟ್ಟಿಸುವಂತಿದೆ ಅವರು ಕೊನೆಯಲ್ಲಿ ಬರೆದಿರುವ ಪತ್ರದಲ್ಲಿನ ವಿವರಗಳು. ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ತಮ್ಮ ಪಾಲಿಗೆ ಮಗನೇ ಆಗಿದ್ದ ಸಿದ್ಧಾರ್ಥ ಅವರ ಅಗಲಿಕೆಯಿಂದ ಎಸ್.ಎಂ.ಕೃಷ್ಣ ಮತ್ತು ಕುಟುಂಬ ವರ್ಗ ಅನುಭವಿಸುತ್ತಿರುವ ನೋವು-ಸಂಕಟಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದಿನೇಶ್ ಗುಂಡೂರಾವ್: ವಿ.ಜಿ.ಸಿದ್ಧಾರ್ಥ ನಿಗೂಢ ಅಂತ್ಯ ಆತಂಕಕಾರಿ. ಅವರ ಅಂತಿಮ ಪತ್ರದ ಆಧಾರದಲ್ಲಿ, ಕೇಂದ್ರ ಸರಕಾರವು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಮೂಲಕ ಬೆದರಿಕೆ, ಕಿರುಕುಳ ನೀಡುತ್ತಿತ್ತೇ? ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News