ಟಿಪ್ಪು ಜಯಂತಿ ರದ್ದು ಮಾಡಿ ಬಿಎಸ್‌ವೈ ಜನರ ಭಾವನೆಯನ್ನು ಕೆಣಕಿದ್ದಾರೆ: ಡಾ.ಬಂಜಗರೆ ಜಯಪ್ರಕಾಶ್

Update: 2019-07-31 17:50 GMT

ಮೈಸೂರು,ಜು.30: ಮುಖ್ಯಮಂತಿಯಾಗಿ ಆಯ್ಕೆಯಾದ ಕೂಡಲೇ ಯಡಿಯೂರಪ್ಪ ತಮ್ಮ ಆದ್ಯತೆಯ ವಿಷಯವಾಗಿ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವ ಮೂಲಕ ಜನರ ಭಾವನೆಗಳನ್ನು ಕೆಣಕುವ ಕೆಲಸವನ್ನು ಮಾಡಿದ್ದಾರೆ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹುಣಸೂರು ರಸ್ತೆಯಲ್ಲಿರುವ ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ದಿ.ರಾಕೇಶ್ ಸಿದ್ದರಾಮಯ್ಯ ಅವರ ಮೂರನೇ ವರ್ಷದ ಪುಣ್ಯಸ್ಮರಣೆ, ಸಾಮಾಜಿಕ ನ್ಯಾಯ-ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಡಳಿತ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯಾದಾಗ ಕಾರ್ಯಕ್ರಮಗಳನ್ನು ಪ್ರಕಟ ಮಾಡುವುದು ಸಂಪ್ರದಾಯ, ಅವರು ಯಾವುದನ್ನು ಪ್ರಕಟ ಮಾಡುತ್ತಾರೆ ಅದು ಅವರ ಆದ್ಯತೆ ಎಂದು ಪರಿಗಣಿಸುತ್ತೇವೆ. ಆದರೆ ಹೊಸ ಮುಖ್ಯಮಂತ್ರಿ ಆದ್ಯತೆಯ ವಿಷಯವಾಗಿ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ಇನ್ನೂ ಎರಡುವರೆ ತಿಂಗಳು ಇದೆ. ಇಂತಹ ಸಂದರ್ಭದಲ್ಲಿ ಇದು ಅಗತ್ಯವಿತ್ತೆ ? ಟಿಪ್ಪು ಜಯಂತಿ ಆಚರಣೆಯಲ್ಲಿ ಜಗಳ ನಡೆಯುತ್ತಿರಲಿಲ್ಲ, ಜಗಳ ಮಾಡಿಸುತ್ತಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಹಲವಾರು ತಾಲೂಕುಗಳಲ್ಲಿ ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ, ಅದನ್ನು ಆದ್ಯತೆಯಾಗಿ ತೆಗೆದುಕೊಳ್ಳದೆ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಹಾಗಿದ್ದರೆ ಆ ವರ್ಗವನ್ನು ಸಮಾಧಾನದಿಂದ ಇರಲು ಬಿಡುವುದಿಲ್ಲ ಎಂಬ ಸಂದೇಶವಾಗಿದೆ ಎಂದು ನೇರವಾಗಿ ಆರೋಪಿಸಿದರು.

ಓರ್ವ ಮುಖ್ಯಮಂತ್ರಿ ಎಲ್ಲರನ್ನು ಒಗ್ಗೂಡಿಸಿ ಎಲ್ಲರಿಗೂ ಹಂಚಿ ತಾನೂ ಬದುಕುವ ರೀತಿಯ ಆಡಳಿತ ನೀಡಬೇಕು. ರಾಜ್ಯ ಬರಗಾಲದಿಂದ ನಲುಗುತ್ತಿದೆ. ಕೇಂದ್ರದಿಂದ 6ಸಾವಿರ, ರಾಜ್ಯದಿಂದ 4 ಸಾವಿರ, ಇಷ್ಟು ಇದ್ದರೆ ಒಂದು ಕುಟುಂಬ ವರ್ಷ ಪೂರ್ತಿ ಬದುಕಲು ಸಾಧ್ಯವೆ ? ಇವರಿಗೆ ನಿಜವಾದ ಸಾಮಾಜಿಕ ಬದ್ಧತೆಯ ಆದ್ಯತೆ ಇದ್ದಿದ್ದರೆ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ ಅದರ ಬಗ್ಗೆ ಚಿಂತಿಸಬೇಕಿತ್ತು. ಅದನ್ನು ಬಿಟ್ಟು ಒಂದು ವರ್ಗ ಅಥವಾ ಸಮುದಾಯ ತಮ್ಮ ನಾಯಕ ಎಂದು ಬಿಂಬಿಸಿಕೊಂಡಿರುವುದನ್ನು ರದ್ದುಗೊಳಿಸುವ ಮೂಲಕ ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News