ಒಸಾಮ ಬಿನ್ ಲಾದೆನ್ ಪುತ್ರ ಹಂಝ ಸಾವು ?

Update: 2019-08-01 04:25 GMT

ವಾಷಿಂಗ್ಟನ್ : ಅಲ್-ಕೈದಾ ಸ್ಥಾಪಕ ಹಾಗೂ ಕುಖ್ಯಾತ ಉಗ್ರ ಒಸಾಮ ಬಿನ್ ಲಾದೆನ್‍ನ ಪುತ್ರ ಹಂಝ ಬಿನ್ ಲಾದೆನ್ ಮೃತ ಪಟ್ಟಿದ್ದಾನೆಂದು  ಅಮೆರಿಕಾದ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಆತ ಎಲ್ಲಿ, ಹೇಗೆ, ಯಾವಾಗ ಮೃತಪಟ್ಟನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆತನ  ಕುರಿತಾದ ಮಾಹಿತಿ ನೀಡಿದವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕಾ ಸರಕಾರ ಫೆಬ್ರವರಿ ತಿಂಗಳಿನಲ್ಲಿ ಘೋಷಿಸಿತ್ತು.

ಸುಮಾರು 30 ವರ್ಷ ಪ್ರಾಯದವನೆಂದು ತಿಳಿಯಲಾಗಿರುವ ಹಂಝ ಅಮೆರಿಕಾ ಮತ್ತು ಇತರ ದೇಶಗಳ ವಿರುದ್ಧ ದಾಳಿ ನಡೆಸಬೇಕೆಂದು ಕರೆ ನೀಡುವ ವೀಡಿಯೊ ಮತ್ತು ಆಡಿಯೊ ಸಂದೇಶಗಳನ್ನು ಬಿಡುಗಡೆಗೊಳಿಸಿದ್ದ ಎಂದು ಹೇಳಲಾಗಿದೆ.

ಹಂಝ ಸಾವಿಗೀಡಾಗಿದ್ದಾನೆಂಬ ಸುದ್ದಿಯ ಕುರಿತಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಕೂಡ ಈ ಬಗ್ಗೆ ಮೌನ ವಹಿಸಿದ್ದಾರೆ.

ಪಾಕಿಸ್ತಾನದಲ್ಲಿ ಮೇ 2011ರಂದು ಅಮೆರಿಕಾದ ವಿಶೇಷ ಪಡೆಗಳು ತನ್ನ ತಂದೆಯನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರ ತೀರಿಸುವಂತೆ ಹಂಝ ಜಿಹಾದಿಗಳಿಗೆ ಕರೆ ನೀಡಿದ್ದ ಎನ್ನಲಾಗಿದ್ದು, ಆತನ ಪೌರತ್ವವನ್ನು ಸೌದಿ ಅರೇಬಿಯಾ ಮಾರ್ಚ್ ತಿಂಗಳಲ್ಲಿ ರದ್ದು ಪಡಿಸಿತ್ತು.

ಪಾಕಿಸ್ತಾನದ ಅಬ್ಬೊಟ್ಟಬಾದ್ ನಲ್ಲಿ ಒಸಾಮ ಬಿನ್ ಲಾದೆನ್ ನೆಲೆಯ ಮೇಲೆ 2011ರಲ್ಲಿ ಅಮೆರಿಕಾದ ವಿಶೇಷ ಪಡೆಗಳು ದಾಳಿ ನಡೆಸಿದ ಸಂದರ್ಭ ವಶಪಡಿಸಿಕೊಳ್ಳಲಾದ ದಾಖಲೆಗಳಲ್ಲಿ ಹಂಝನನ್ನು ಅಲ್-ಕೈದಾ ನಾಯಕತ್ವ ವಹಿಸಲು ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿತ್ತು. ಇನ್ನೊಬ್ಬ ಹಿರಿಯ ಅಲ್ ಕೈದಾ ನಾಯಕನ ಪುತ್ರಿಯೊಂದಿಗೆ ಹಂಝಾನ ವಿವಾಹದ ವೀಡಿಯೊವನ್ನೂ ಅಮೆರಿಕಾ ಪಡೆಗಳು ಪತ್ತೆ ಹಚ್ಚಿದ್ದವು. ವಿವಾಹ ಇರಾನ್ ನಲ್ಲಿ ನಡೆದಿರಬೇಕೆಂದು ತಿಳಿಯಲಾಗಿತ್ತು. ಆತನ ಮಾವ ಅಬ್ದುಲ್ಲಾ ಅಹ್ಮದ್ ಅಬ್ದುಲ್ಲಾ 1988ರಲ್ಲಿ ತಾಂಜಾನಿಯಾ ಹಾಗೂ ಕೆನ್ಯಾದಲ್ಲಿನ ಅಮೆರಿಕಾ ದೂತಾವಾಸದ ಮೇಲೆ ನಡೆದ ಬಾಂಬ್ ದಾಳಿಗಳ ರೂವಾರಿಯಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News