ಹುತ್ತಕ್ಕೆ ಹಾಲನ್ನು ಎರೆಯುವ ಬದಲು ಮಕ್ಕಳಿಗೆ ನೀಡಿ: ಜಯಮೃತ್ಯುಂಜಯ ಸ್ವಾಮೀಜಿ

Update: 2019-08-01 18:26 GMT

ದಾವಣಗೆರೆ, ಆ.1: ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿಯಲ್ಲಿ ಕಲ್ಲಿನ ನಾಗನಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ನೀಡಿ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜಿಎಂ ಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಡೆದ 22 ವರ್ಷದ 'ಕಲ್ಲುನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು' ಎಂಬ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಅವರು, ದೇಶಾದ್ಯಂತ ಎರಡು ಮೂರು ದಿನಗಳಲ್ಲಿ ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಲೀಟರ್‌ನಷ್ಟು ಹಾಲನ್ನು ನಾಗರ ಮೂರ್ತಿಗಳಿಗೆ ಹುತ್ತಗಳಿಗೆ ಎರೆದು ಪೋಲು ಮಾಡಲಿದ್ದಾರೆ. ಅದನ್ನು ಮಕ್ಕಳಿಗೆ ನೀಡಿದರೆ ಸದೃಢವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಲು ಹುತ್ತಕ್ಕೆ ಹಾಕುವುದರಿಂದ ಹಾವುಗಳು ಸಹ ಸಾವನ್ನಪ್ಪುವ ಘಟನೆಗಳು ನಡೆದಿದೆ. ಆದ್ದರಿಂದ ಕೇವಲ ಪೂಜೆಯನ್ನು ಸಲ್ಲಿಸಿ, ಹಾಲನ್ನು ಮಕ್ಕಳಿಗೆ ವಿತರಣೆ ಮಾಡಬೇಕು. ರಾಜ್ಯ ಸರಕಾರ ಶಿಕ್ಷಣ ಇಲಾಖೆ ವತಿಯಿಂದ ಹಾಲು ಕುಡಿಯುವ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಇದರಿಂದ ಎಲ್ಲಾ ಜಾತಿಯ, ಸಮುದಾಯದ ಮಕ್ಕಳು ಹಾಲು ಕುಡಿಯುವುದರಿಂದ ಭಾವೈಕ್ಯತೆ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News