ಅತೃಪ್ತರ ಜೊತೆ ರಾಜಿ ಮಾಡಿಕೊಳ್ಳಲ್ಲ: ದಿನೇಶ್ ಗುಂಡೂರಾವ್

Update: 2019-08-01 14:40 GMT

ಬೆಂಗಳೂರು, ಆ.1: ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗಿರುವ ಅತೃಪ್ತರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅವರ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ. ಕಾರ್ಯಕರ್ತರಿಗೂ ಅವರ ಜೊತೆ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಈಗಾಗಲೇ ಆ ಕ್ಷೇತ್ರಗಳಲ್ಲಿನ ಬ್ಲಾಕ್ ಸಮಿತಿಗಳನ್ನು ವಿಸರ್ಜಿಸಲಾಗಿದೆ ಎಂದರು.

ಇಂತಹವರ ಸಹವಾಸವೇ ನಮಗೆ ಬೇಡ ಎಂದು ಉಚ್ಚಾಟನೆ ಮಾಡಲಾಗಿದೆ. ಸ್ಪೀಕರ್ ಅವರು ನಮ್ಮ ವಾದವನ್ನು ಆಲಿಸಿ 17 ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಇದೀಗ ಅವರು ಸುಪ್ರೀಂಕೋರ್ಟ್‌ನಲ್ಲಿ ರಕ್ಷಣೆ ಪಡೆಯಲು ಹೋಗಿದ್ದಾರೆ. ಸಂವಿಧಾನದಲ್ಲಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಸುಪ್ರೀಂಕೋರ್ಟ್ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷಾಂತರಿಗಳು, ಬೆನ್ನಿಗೆ ಚೂರಿ ಹಾಕುವವರಿಗೆ ತಕ್ಕ ಶಾಸ್ತಿಯಾಗಬೇಕು. ಈ ಸಂಬಂಧ ನ್ಯಾಯಾಲಯ ಸರಿಯಾದ ನಿರ್ಣಯ ಕೈಗೊಳ್ಳದಿದ್ದರೆ, ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಆದುದರಿಂದ, ಅತೃಪ್ತರ ಬಗೆಗಿನ ಕಾನೂನು ಹೋರಾಟದ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅತೃಪ್ತರು ಕಾಂಗ್ರೆಸ್‌ಗೆ ಹೇಗೆ ಮೋಸ ಮಾಡಿ ಹೋಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಇನ್ನೂ ಕೂಡ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ, ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಲಾಗುತ್ತಿದೆ. ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಎಲ್ಲ ಸಂಗತಿಗಳನ್ನು ವಿರೋಧ ಪಕ್ಷವಾಗಿ ಸಮರ್ಥವಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು.

ಶಾಸಕರ ರಾಜೀನಾಮೆಯಿಂದ ತೆರವಾಗಿರುವ 17 ಕ್ಷೇತ್ರಗಳಿಗೆ ಇನ್ನು ಆರು ತಿಂಗಳಲ್ಲಿ ಉಪಚುನಾವಣೆ ಎದುರಾಗುವ ಸಾಧ್ಯತೆಯಿದೆ. ಚುನಾವಣೆಯ ರಣತಂತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಒಂದೊಂದು ಕ್ಷೇತ್ರಕ್ಕೆ ಒಬ್ಬ ಹಿರಿಯರ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ನಿರ್ಧರಿಸಿದ್ದೇವೆ. ಆ ತಂಡ ನೀಡುವ ವರದಿಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

17 ಕ್ಷೇತ್ರಗಳಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ. ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಪಕ್ಷಕ್ಕೆ ನಿಷ್ಠರಾಗಿರುವವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

15 ಜನ ಏನು ವಿಷ ತೆಗೆದುಕೊಳ್ಳಬೇಕಾ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸರಕಾರವನ್ನು ಕೆಡವಿದ್ದು ಯಾರು ಎಂಬುದು ಇದೀಗ ಅವರ ಹೇಳಿಕೆಯಿಂದಲೇ ಸಾಬೀತಾಗಿದೆ. ಇದಕ್ಕಿಂತ ಸಾಕ್ಷಿ ಬೇಕೆ. ನಾವು ಏನು ಮಾಡಿಲ್ಲವೆಂದು ಹೇಳುತ್ತಿದ್ದವರ ಬಾಯಿಯಿಂದಲೇ ಈಗ ಸತ್ಯ ಹೊರ ಬಿದ್ದಿದೆ. ನಮ್ಮ ಮತ್ತಷ್ಟು ಶಾಸಕರಿಗೂ ಆಮಿಷ ಒಡ್ಡಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಟಿಪ್ಪು ಸುಲ್ತಾನ್ ಜಯಂತಿ ರದ್ದು ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿರುವ ಸರಕಾರ, ಮತಗಳಿಗಾಗಿ ಏನೆಲ್ಲ ಬೇಕೋ ಅದನ್ನು ಮಾಡುತ್ತಿದೆ. ಕೇವಲ ಹಿಂದೂ ಕಾರ್ಯಕರ್ತರನ್ನೇ ಏಕೆ ಬಿಡುಗಡೆ ಮಾಡಬೇಕು. ನಿಷ್ಪಕ್ಷಪಾತವಾಗಿ ಎಲ್ಲರ ಪ್ರಕರಣಗಳ ಕುರಿತು ತನಿಖೆ ಮಾಡಿ ಕೈಬಿಡಲಿ, ಪೊಲೀಸರಿಗೆ ತನಿಖೆಗೆ ಮುಕ್ತ ಅವಕಾಶ ಕೊಡಿ, ರಾಜಕೀಯವಾಗಿ ತಪ್ಪಿತಸ್ಥರನ್ನು ರಕ್ಷಣೆ ಮಾಡುವುದು ಬೇಡ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News