ಸಾಲಮನ್ನಾ, ಆರ್ಥಿಕ ಸ್ಥಿತಿ, ಋಣಮುಕ್ತ ಕಾಯ್ದೆ ಪರಿಣಾಮಕಾರಿ ಅನುಷ್ಠಾನ

Update: 2019-08-01 16:23 GMT

ಬೆಂಗಳೂರು, ಆ. 1: ರೈತರ ಸಾಲಮನ್ನಾ, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಋಣಮುಕ್ತ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಸೇರಿ ವಿವಿಧ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಆರ್ಥಿಕ, ಸಹಕಾರ, ವಸತಿ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಅವರು, ರೈತರ ಸಾಲಮನ್ನಾ ಪ್ರಕ್ರಿಯೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಸಿಎಂ ಸಲಹೆಗಾರ ಲಕ್ಷ್ಮಿನಾರಾಯಣ, ಹಿರಿಯ ಅಧಿಕಾರಿಗಳಾದ ಐಎನ್‌ಎಸ್ ಪ್ರಸಾದ್, ಏಕ್‌ರೂಪ್‌ಕೌರ್, ವಂದನಾ ಶರ್ಮಾ, ಇ.ವಿ.ರಮಣರೆಡ್ಡಿ, ನಾಗಾಂಬಿಕೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಲೋಪ ಸರಿಪಡಿಸಿ: ಮೊದಲಿಗೆ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಯಡಿಯೂರಪ್ಪ, ಹಿಂದಿನ ಸರಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲಮನ್ನಾ ಯೋಜನೆಯಡಿ ಎಷ್ಟು ಮೊತ್ತದ ಹಣ ಬಿಡುಗಡೆಯಾಗಿದೆ, ರೈತರಿಗೆ ಎಷ್ಟು ಮೊತ್ತ ತಲುಪಿದೆ ಎಂಬ ಮಾಹಿತಿ ಪಡೆದರು.

ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ 45 ಸಾವಿರ ಕೋಟಿ ರೂ.ಸಾಲಮನ್ನಾ ಘೋಷಿಸಿದ್ದು, ಆ ಪೈಕಿ ಈ ವರೆಗೂ 18 ಸಾವಿರ ಕೋಟಿ ರೂ.ಮನ್ನಾ ಆಗಿದ್ದು, 25 ರಿಂದ 26 ಸಾವಿರ ಕೋಟಿ ರೂ.ಯಷ್ಟು ಸಾಲಮನ್ನ ಬಾಕಿ ಇದೆ. ಈ ಯೋಜನೆಯಲ್ಲಿ ಕೆಲ ಲೋಪದೋಷಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಸಾಲಮನ್ನಾ ಯೋಜನೆಯಿಂದ ವಿವಿಧ ಇಲಾಖೆಗೆ ಮೀಸಲಿಟ್ಟಿದ್ದ ಅನುದಾನ ಕಡಿತವಾಗಿದೆ. ಅಲ್ಲದೆ ಆರ್ಥಿಕ ಸ್ಥಿತಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದಲ್ಲಾಳಿಗಳ ಕಡಿವಾಣಕ್ಕೆ ನೋಡೆಲ್ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ಕೊಟ್ಟರು.

ಘೋಷಿತ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಯಾವುದೇ ಕಾರ್ಯಕ್ರಮಗಳಿಗೆ ಹಣದ ಸಮಸ್ಯೆ ಇದ್ದರೆ ತನ್ನ ಗಮನಕ್ಕೆ ತರಬೇಕು ಎಂದು ಅವರು, ಎಲ್ಲ ಕಾರ್ಯಕ್ರಮಗಳಿಗೆ ಆದ್ಯತೆ ಮೇರೆಗೆ ಹಣವನ್ನು ಒದಗಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಾಕೀತು ಮಾಡಿದರು.

ಋಣಮುಕ್ತ ಕಾಯ್ದೆ ಜಾರಿ ಸಂಬಂಧ ನೋಡೆಲ್ ಅಧಿಕಾರಿ ನೇಮಕ ಏಕಪಕ್ಷೀಯ ನಿರ್ಧಾರವಾಗಿದ್ದು, ಕೂಡಲೇ ಇದನ್ನು ಸರಿಪಡಿಸಬೇಕು. ಅಲ್ಲದೆ, ಕಾಯ್ದೆಯಲ್ಲಿನ ಲೋಪಗಳನ್ನು ಕೂಡಲೇ ಸರಿಪಡಿಸಬೇಕು. ಖಾಸಗಿ ಲೇವಾದೇವಿದಾರರು ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಸಂಪನ್ಮೂಲ ಕ್ರೋಡೀಕರಣಕ್ಕೆ ಆಸ್ಥೆ ವಹಿಸಿದ್ದಾರೆ. ಋಣಮುಕ್ತ ಕಾಯ್ದೆ ಜಾರಿಗೊಳಿಸಲು ಶೀಘ್ರವೇ ನಿಯಮಾವಳಿ ರಚಿಸಲಾಗುವುದು. ಬೆಳೆ ಸಮೀಕ್ಷೆಗೆ ಗ್ರಾಮೀಣ ಯುವಕರ ನೇಮಕ ಉತ್ತಮ ಯೋಜನೆ, ಅದನ್ನು ಮುಂದುವರಿಸಲಾಗುವುದು. ಸಿಎಂ ವಸತಿ ಯೋಜನೆಯಡಿ 1ಲಕ್ಷ ಮನೆ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ’
-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News