ಮಂಡ್ಯ: ಟಿಪ್ಪು ಜಯಂತಿ ರದ್ಧತಿ ಖಂಡಿಸಿ ಪ್ರತಿಭಟನೆ

Update: 2019-08-01 17:57 GMT

ಮಂಡ್ಯ, ಆ.1: ಟಿಪ್ಪು ಸುಲ್ತಾನ್ ಜಯಂತಿ ರದ್ದುಪಡಿಸಿರುವ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ದಸಂಸ ಹಾಗೂ ರೈತಸಂಘದ ಕಾರ್ಯಕರ್ತರು ಗುರುವಾರ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬಿಜೆಪಿ ಸರಕಾರ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ದೇಶ ಕಂಡ ಪ್ರಥಮ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಜನಪರ ಕಾಳಜಿಯ ಆಡಳಿತಗಾರ, ಮಾನವೀಯ ಗುಣದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ರದ್ದುಪಡಿಸಿರುವುದು ತೀವ್ರ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾಡಿನ ಮಹಾನ್ ಸಾಧಕರ, ಚಿಂತಕರ, ಸಮಾಜ ಸುಧಾರಕರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಟಿಪ್ಪು ಸುಲ್ತಾನ್ ಜಯಂತಿಯನ್ನೂ ಆಚರಿಸಬೇಕು. ಸರಕಾರ ತನ್ನ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ರೈತ ಸಂಘದ ಮಂಜೇಶ್‍ಗೌಡ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ತೂಬಿನಕೆರೆ ಪ್ರಸನ್ನ, ತಾಲೂಕು ಸಂಚಾಲಕ ರವಿಚಂದ್ರ ಗಂಜಾಂ, ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News