ಆ.3ರಂದು ಹಾಡು ಬಾ ಕೋಗಿಲೆ-2 ಗ್ರ್ಯಾಂಡ್ ಫಿನಾಲೆ

Update: 2019-08-01 17:59 GMT

ಮಂಡ್ಯ, ಆ.1: ಎಸ್.ಟಿವಿ ಹಾಗೂ ಸಕ್ಕರೆ ನಾಡು ಸಮುದಾಯ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಹಾಡು ಬಾ ಕೋಗಿಲೆ-2 ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ನಗರದ ಕಲಾಮಂದಿರದಲ್ಲಿನ ಅಂಬಿ ವೇದಿಕೆಯಲ್ಲಿ ಆ.3ರಂದು ಸಂಜೆ.5 ಗಂಟೆಗೆ ಆಯೋಜಿಸಲಾಗಿದೆ ಎಂದು ಎಸ್.ಟಿವಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಸಿಂಗ್.ಎಸ್.ಸಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸದರಿ ರಿಯಾಲಿಟಿ ಶೋವನ್ನು 32 ಕಂತುಗಳಲ್ಲಿ 22 ಸ್ಪರ್ಧಿಗಳಿಂದ ಆಯೋಜಿಸಲಾಗಿತ್ತು. ಇದೀಗ ಅಂತಿಮವಾಗಿ 8 ಮಂದಿ ಸ್ಫರ್ಧಾಳುಗಳು ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪಾಂಡವಪುರ, ಮದ್ದೂರು, ಮಳವಳ್ಳಿ ತಾಲೂಕುಗಳಿಂದ ತಲಾ ಒಬ್ಬರು, ಮಂಡ್ಯ ತಾಲೂಕಿನ ವಿವಿಧ ಹಳ್ಳಿಗಳಿಂದ 5 ಮಂದಿ ಸ್ಫರ್ಧಾಳುಗಳು ಫಿನಾಲೆ ತಲುಪಿದ್ದಾರೆ. ಸ್ಫರ್ಧೆಯು 2 ಹಂತದಲ್ಲಿ ನಡೆಯಲಿದ್ದು, ಸಂಪೂರ್ಣ ಶಾಸ್ತ್ರೀಯ ಹಾಡುಗಳ ಸುತ್ತು, ವೇಗದ ಹಾಡುಗಳ ಸುತ್ತು ನಡೆಸಿ ಮೊದಲ 3 ಸ್ಥಾನಗಳಿಗೆ 100 ಮಂದಿ ಝೂರಿ ಸದಸ್ಯರಿಂದ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಹಾಡುಗಳಿಗೆ ಮೈಸೂರಿನ ಶರತ್ ಮತ್ತು 6 ಜನ ಸಂಗೀತ ವಿಧ್ವಾಂಸರ ತಂಡ ನೈಜ ಸಂಗೀತ ನೀಡಲಿದ್ದು, ಎಲ್ಲ ಸಂಚಿಕೆಗಳ ತೀರ್ಪುಗಾರರಾಗಿದ್ದ ಡಾ.ಮಾದೇಶ್, ರಶ್ಮಿ ಚಿಕ್ಕಮಗಳೂರು ಹಾಗೂ ಮೈಸೂರಿನ ಸರಸ್ವತಿ ಅವರ ಜತೆಗೆ ಮೈಸೂರು ಫೈನ್ ಆಟ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ರಾಮಸ್ವಾಮಿ ಭಾಗವಹಿಸುವರು ಎಂದು ವಿವರಿಸಿದರು.

ಮಂಡ್ಯದ ಪ್ರಸಿದ್ದ ನೃತ್ಯ ತರಬೇತಿ ಶಾಲೆ ಜೈ ಮಿರಾಕಲ್ ನೃತ್ಯ ಶಾಲೆಯ ಜೈಕುಮಾರ್ ಅವರಿಂದ ಹಿರಿಯ ನಾಗರಿಕರು ಹಾಗೂ ಯುವಕರಿಂದ ನೃತ್ಯ ಪ್ರದರ್ಶನ ಮಾಡಲಾಗುವುದು. ರಾಜಲಕ್ಷ್ಮೀ, ಆಂಗಿಕಂ ಚಿತ್ರತಂಡಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವೈರಮುಡಿ, ಟಿ.ಡಿ.ನಾಗರಾಜ್, ಸಂದೇಶ್, ನಟರಾಜ್ ಹಾಗೂ ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News