ಕಾನೂನುಗಳ ಮಹಾತಾಯಿ ಸಂವಿಧಾನ: ಎಚ್.ಎಸ್.ನಾಗಮೋಹನ್‌ದಾಸ್

Update: 2019-08-01 18:05 GMT

ವಿಜಯಪುರ, ಆ.1: ಎಲ್ಲ ಕಾನೂನುಗಳ ಮಹಾತಾಯಿ ನಮ್ಮ ಸಂವಿಧಾನ. ಭಾರತದ ಸಂವಿಧಾನ ಇಡೀ ಪ್ರಪಂಚದ ಗಮನವನ್ನು ಸೆಳೆದಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ್ ಹೇಳಿದರು.

ಗುರುವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಆರ್.ವಿ.ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಅಭಿಯಾನದ ಅಡಿಯಲ್ಲಿ ಆಯೋಜಿಸಿದ್ದ ಸಂವಿಧಾನ ಓದು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸರಕಾರದ ಆಡಳಿತ ವ್ಯವಸ್ಥೆ ಸಂವಿಧಾನದ ಮೇಲೆ ನಿಂತಿದೆ. ದೇಶದಲ್ಲಿ ಅಭಿವೃದ್ಧಿ ಸಾಧಿಸಲು, ಮಹಿಳೆಯರು, ದಲಿತರು, ಬುಡಕಟ್ಟು ಸಮುದಾಯದವರು ಸೇರಿ ಎಲ್ಲ ವರ್ಗೀಯ ಜನರು ತಲೆ ಎತ್ತಿ ಬದುಕಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ. ನಮ್ಮ ಸಂವಿಧಾನ ಭ್ರಾತೃತ್ವ, ಸಹೋದರತೆ, ಸಮಾನತೆಯ ನೆಲೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶ ಅತೀ ವೇಗದಲ್ಲಿ ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಮುಂತಾದ ಎಲ್ಲ ರಂಗಗಳಲ್ಲಿಯೂ ಬೆಳೆಯುತ್ತಿರಲು ಸಂವಿಧಾನವು ಬಹು ಮುಖ್ಯ ಪಾತ್ರ ವಹಿಸುತ್ತಿದೆ. ನಮ್ಮ ಜೀವನದಲ್ಲಿ ನಮಗೆ ಅವಶ್ಯವಿರುವ ಎಲ್ಲ ಹಕ್ಕುಗಳನ್ನು ಒದಗಿಸಿದೆ. ಅಂತಹ ಸಂವಿಧಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕಾಗಿದೆ ಎಂದು ಹೇಳಿದರು.

ವಿವಿಯ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ಸಂವಿಧಾನವು ಧ್ವನಿ ಇರದವರಿಗೆ ಧ್ವನಿಯಾಗುವ ಮೂಲಕ ಅವರ ಹಕ್ಕುಗಳನ್ನು ತಂದುಕೊಟ್ಟಿದೆ. ಅಂತ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಅವರಿಗೆ ನಾವೆಲ್ಲ ಸದಾ ಋಣಿಯಾಗಿರಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News