×
Ad

ಅಂಬೇಡ್ಕರ್ ವಿಚಾಧಾರೆ ದೊಡ್ಡ ಸಮುದ್ರವಿದ್ದಂತೆ: ಡಾ.ರಮೇಶ್ಚಂದ್ರ ದತ್ತ

Update: 2019-08-01 23:51 IST

ಚಿಕ್ಕಮಗಳೂರು, ಆ.1: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರ ವಿಚಾರಧಾರೆ ದೊಡ್ಡ ಸಮುದ್ರವಿದ್ದಂತೆ ಅದನ್ನು ಮಾತಿನಲ್ಲಿ ವಿಶ್ಲೇಷಿಸಲಾಗದು, ಅಧ್ಯಯನವೊಂದೇ ಮಾರ್ಗ ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ರಮೇಶ್ಚಂದ್ರ ದತ್ತ ಹೇಳಿದರು. 

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‍ರವರ 128ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. 

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಹೋರಾಟ ನಡೆಸಿದ ಬಾಬಾ ಸಾಹೇಬ ಅಂಬೇಡ್ಕರ್‍ರವರು ಎಲ್ಲಾ ವರ್ಗದ ಬಡವರ ಏಳಿಗೆಗೆ ಶ್ರಮಿಸಿದ್ದು, ಸಂವಿಧಾನದ ಆಶಯ ಇದಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳದ ಈ ಸಮಾಜ ಇಂಥ ಮಹಾನ್ ವ್ಯಕ್ತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿದ್ದು ದುರ್ದೈವದ ಸಂಗತಿ ಎಂದು ವಿಷಾಧಿಸಿದರು. 

ತಮ್ಮ ಸ್ವಾರ್ಥ ಸಾಧನೆಗಾಗಿ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಅಂಬೇಡ್ಕರ್ ಜಯಂತಿಯನ್ನು ನಾಮಕಾವಸ್ತೆಗಷ್ಟೇ ಆಚರಿಸುತ್ತಿವೆ. ಜಾತಿ ಪದ್ದತಿ, ಮೌಢ್ಯತೆ ಜೊತೆಗೆ ಎಲ್ಲರಿಗೂ ಸಮಾನ ಹಕ್ಕು ದೊರೆಯಬೇಕೆಂಬುದು ಅಂಬೇಡ್ಕರ್‍ರವರ ಆಶಯವಾಗಿತ್ತು. ಅದನ್ನು ಅನುಷ್ಠಾನಗೊಳಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದು ತಿಳಿಸಿದರು. 

ಸಾಹಿತಿ ಹಾಗೂ ಸಮಾಜ ಪರಿವರ್ತನಾ ಚಳುವಳಿಯ ನಾಯಕಿ ಮಂಗಳೂರಿನ ಅತ್ರಾಡಿ ಅಮೃತಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸಂವಿಧಾನ ಕೊಟ್ಟ ಮಹಾನ್ ಚೇತನ ಅಂಬೇಡ್ಕರ್‍ರವರನ್ನು ಕೇವಲ ದಲಿತರ ನಾಯಕರನ್ನಾಗಿ ಬಿಂಬಿಸಿರುವುದು ವಿಷಾಧನೀಯವಾಗಿದ್ದು, ಅಂಬೇಡ್ಕರ್‍ರವರ ಜಯಂತಿಯನ್ನು ದಲಿತ ಸಂಘಟನೆಗಳು ಸರ್ಕಾರ ಆಚರಿಸದೇ ಎಲ್ಲಾ ವರ್ಗದ ಜನರು ಆಚರಿಸುವಂತಾಗಬೇಕು ಆಗ ಸಂವಿಧಾನ ಶಿಲ್ಪಿ ಅಂಬೇಡ್ಕರ್‍ರವರ ಆಶಯಕ್ಕೆ ಅರ್ಥ ಬರುತ್ತದೆ ಎಂದರು. 

ವೈಜ್ಞಾನಿಕ ಚಿಂತಕ ಹಾಗೂ ಪವಾಡ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಸಮಾರಂಭದಲ್ಲಿ ಮಾತನಾಡುವ ಮೂಲಕ ಹಲವು ಪವಾಡಗಳನ್ನು ಸಭೆಯಲ್ಲಿ ಬಯಲು ಮಾಡುವ ಮೂಲಕ ಪ್ರಾತ್ಯಕ್ಷಿಕೆಯನ್ನು ನೀಡಿದರು. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರ ಬಿ.ಅಬ್ದುಲ್ಲಾ ಖುದ್ದುಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹೋರಾಟಗಾರ ಹಾಗೂ ಪರಿವರ್ತನಾ ಚಳುವಳಿಯ ಮುಖಂಡ ಕೆ.ಟಿ. ರಾಧಾಕೃಷ್ಣ, ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಸಮಾಧೇಷ್ಠ ಆರ್. ಅನಿಲ್, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ತಾಂತ್ರಿಕ ಅಭಿಯಂತರ ಜಿ.ಎಸ್. ನಾಗರಾಜ್‍ಮೂರ್ತಿ, ವಿಭಾಗೀಯ ಸಂಚಾಲನಾಧಿಕಾರಿ ಎಸ್.ಎನ್. ಅರುಣ್, ಬಹುಜನ ವಿದ್ಯಾರ್ಥಿ ಸಂಘದ ಸಂಯೋಜಕ ಎಂ.ಎನ್. ಚಿದಂಬರ್, ಕೆ.ಎಸ್.ಆರ್.ಟಿ.ಸಿ. ಎಸ್ಸಿಎಸ್ಟಿ ಯೂನಿಯನ್‍ನ ಅಧ್ಯಕ್ಷ ಎಂ. ಪ್ರದೀಪ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಪ್ರದೀಪ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ವಂದಿಸಿದರು. ವಿದ್ಯಾರ್ಥಿ ಅಣ್ಣಯ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಚಿಕ್ಕಮಗಳೂರು ತಾಲ್ಲೂಕಿನ ಶಾಂತವೇರಿ ಅಂಬೇಡ್ಕರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಕೆ.ಎಸ್.ಆರ್.ಟಿ.ಸಿ. ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News