ಅನರ್ಹ ಶಾಸಕ ಮುನಿರತ್ನ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್

Update: 2019-08-02 13:12 GMT

ಬೆಂಗಳೂರು, ಆ.2: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ ನನ್ನನ್ನು ಭೇಟಿಯಾಗಿಲ್ಲ. ಸುಮ್ಮನೆ ಮಾಧ್ಯಮಗಳಲ್ಲಿ ಈ ವಿಚಾರವನ್ನು ಸೃಷ್ಟಿ ಮಾಡಲಾಗಿದೆ. ಮುನಿರತ್ನ ಹಾಗೂ ನನ್ನ ಭೇಟಿ ಬಗ್ಗೆ ಯಾವುದಾದರೂ ದೃಶ್ಯಾವಳಿಗಳಿದ್ದರೆ ತೋರಿಸಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಅವರು ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಸದ್ಯಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.

ಅನರ್ಹಗೊಂಡಿರುವ ಶಾಸಕರ ಪೈಕಿ ಯಾರು ನನ್ನ ಸಂಪರ್ಕದಲ್ಲಿದ್ದಾರೆ, ಯಾರು ಸಂಪರ್ಕದಲ್ಲಿ ಇಲ್ಲ ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನನ್ನದೇ ಆದ ರಾಜಕಾರಣ ಇದೆ. ಅದನ್ನು ನಾನು ಮಾಡಿಕೊಂಡು ಮುಂದುವರೆಯುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ಮಾರ್ಗದರ್ಶನದಂತೆ ಎಲ್ಲವೂ ನಡೆಯಲಿದೆ ಎಂದರು.

ಉಪ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ಗೆಲುವು ಸಾಧಿಸಿದರೆ ಮತ್ತೆ ಸರಕಾರ ರಚನೆ ಮಾಡಲು ಹಕ್ಕು ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜ್ಯೋತಿಷಿಯಲ್ಲ, ನಾನು ರಾಜಕಾರಣಿ. ಉಪ ಚುನಾವಣೆ ಬಳಿಕ ನಾವು ಸರಕಾರ ರಚನೆ ಮಾಡುತ್ತೇವಾ, ಇಲ್ಲವಾ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ ಎಂದರು.

ನಿಮ್ಮ ಮುಂದೆ ಒಬ್ಬ ಮಾಜಿ ಸಚಿವನಾಗಿ ನಿಂತಿದ್ದೇನೆ. ಈಗ ಕಾಂಗ್ರೆಸ್ ಶಾಸಕ, ಕಾಂಗ್ರೆಸ್ ಕಾರ್ಯಕರ್ತ ಅಷ್ಟೇ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲವು ಶಾಸಕರನ್ನು ಬಿಜೆಪಿಯವರು ಮತ್ತೆ ಸಂಪರ್ಕಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರಿಗೆ ಎಷ್ಟು ಜನ ಬೇಕೋ ಅಷ್ಟು ಜನರನ್ನು ತೆಗೆದುಕೊಳ್ಳಲಿ ಎಂದು ಶಿವಕುಮಾರ್ ಹೇಳಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ಸ್ಥಾನವು ಖಾಲಿಯಿಲ್ಲ ಎಂದರು.

ನಾನು ಯಾವುದಕ್ಕೂ ಆಕಾಂಕ್ಷಿಯಲ್ಲ. ನನಗೆ ನನ್ನ ಕ್ಷೇತ್ರಕ್ಕೆ ಹೋಗಿ ನಮ್ಮ ಜನರನ್ನು ಭೇಟಿ ಮಾಡಿ, ಅವರ ಯೋಗ ಕ್ಷೇಮ ವಿಚಾರಿಸಲು ನಮ್ಮ ನಾಯಕರು ಅವಕಾಶ ಮಾಡಿಕೊಟ್ಟು ಬಿಟ್ಟರೆ ಅಷ್ಟೇ ಸಾಕು ನನಗೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News