ಐಟಿ ಇಲಾಖೆಯಿಂದ ಸಿದ್ದಾರ್ಥಗೆ ಮಾನಸಿಕ ಕಿರುಕುಳ: ಎಚ್.ಎಚ್.ದೇವರಾಜ್

Update: 2019-08-02 12:30 GMT

ಚಿಕ್ಕಮಗಳೂರು, ಆ.2: ಎಬಿಸಿ ಕಂಪೆನಿ ಮತ್ತು ಕಾಫಿ ಡೇ ಗ್ಲೋಬಲ್ ಲಿ. ಮಾಲಕ ಜಿ.ವಿ.ಸಿದ್ದಾರ್ಥ ಅವರ ಸಾವು ಸಂಶಯಸ್ಪಾದವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅವರು ಸಾಯುವ ಮುನ್ನ ಬರೆದಿರುವ ಪತ್ರದಲ್ಲಿ ಐಟಿ ಇಲಾಖೆ ತನಗೆ ಮಾನಸಿಕ ಹಿಂಸೆ ಮಾಡಿದೆ ಎಂದು ನೇರ ಆಪಾದನೆ ಮಾಡಿದ್ದಾರೆ. ಜಿ.ವಿ.ಸಿದ್ದಾರ್ಥ ಸಾವಿನ ಕುರಿತು ಕೂಲಂಕಷವಾದ ತನಿಖೆ ನಡೆಸಬೇಕೆಂದು ಜಿಲ್ಲಾ ಜೆಡಿಎಸ್ ಒತ್ತಾಯಿಸಿದೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಆದಾಯ ತೆರಿಗೆ ಇಲಾಖೆ ಕೇಂದ್ರ ಸರಕಾರದ ಕೈಯಲಿದ್ದು, ಕೇಂದ್ರ ಸರಕಾರದ ನಿರ್ದೇಶನದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದೆ. ಜಿ.ವಿ.ಸಿದ್ದಾರ್ಥ ಅವರ ಸಾವಿಗೆ ಕೇಂದ್ರ ಸರಕಾರವೇ ನೇರಹೊಣೆ ಎಂಬ ಅನುಮಾನವು ಸಾರ್ವಜನಿಕ ವಲಯದಲ್ಲಿ ಮೂಡಿದೆ. ದೊಡ್ಡ ಉದ್ಯಮಿಯೊಬ್ಬರು ಅನುಮಾನಸ್ಪದ ಸಾವಿಗೆ ಶರಣಾದರೂ ಯಾವೊಬ್ಬ ಕೇಂದ್ರ ಸರಕಾರದ ನಾಯಕರು ಸಿದ್ದಾರ್ಥ ಸಾವಿನ ಬಗ್ಗೆ ಸಂತಾಪ ಸೂಚಿಸದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಜಿ.ವಿ.ಸಿದ್ದಾರ್ಥ ಸಾವಿನ ನಂತರ  ಸಾವಿನ ತನಿಖೆ ದಾರಿ ತಪ್ಪುತ್ತಿರುವಂತೆ ಕಂಡು ಬರುತ್ತಿರುವುದು ಸಾರ್ವಜನಿಕರಿಗೆ ಕೇಂದ್ರ ಸರಕಾರದ ಮೇಲೆ ಇನ್ನಷ್ಟು ಅನುಮಾನ ಹೆಚ್ಚಿಸುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ಸತ್ಯ ಸಂಗತಿಯನ್ನು ಹೊರತಂದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಅವರು ಒತ್ತಾಯಿಸಿದರು. 

ಜಿ.ವಿ.ಸಿದ್ದಾರ್ಥ ಅವರಿಗೆ ಇಂತಹ ಸಾವು ಬರುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.  ಜಿ.ವಿ.ಸಿದ್ದಾರ್ಥ ಸಾವಿರಾರು ಜನರಿಗೆ ಉದ್ಯೋಗ ನೀಡಿ ನಶಿಸಿ ಹೋಗುತ್ತಿದ್ದ ಕಾಫಿ ಉದ್ಯಮಕ್ಕೆ ಮರುಜನ್ಮ ನೀಡಿದರು. ಕಾಫಿ ಬೆಳೆಗಾರರಿಗೆ ಸೌಲಭ್ಯಗಳನ್ನು ನೀಡಿ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವಂತಹ ಕೆಲಸ ಮಾಡಿದರು. ಅವರ ಸಾವು ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಆದ ನಷ್ಟವಾಗಿದೆ ಎಂದರು.

ಜಿ.ವಿ.ಸಿದ್ದಾರ್ಥ ಸಾವಿನ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸುತ್ತಿದ್ದ ಮಂಗಳೂರು ಎಸ್ಪಿ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸರಕಾರಕ್ಕೆ ಅಷ್ಟು ಬೇಗ ಯಾಕೆ ವರ್ಗಾವಣೆ ಮಾಡುವ ಅನಿವಾರ್ಯತೆ ಮಾಡಬೇಕೆನಿಸಿತು ಎಂಬುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ ಎಂದು ದೇವರಾಜ್ ಆರೋಪಿಸಿದರು.

ಕೇಂದ್ರ ಸರಕಾರದ ಕೆಲ ಅವೈಜ್ಞಾನಿಕ ನೀತಿಗಳು ಅನೇಕ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ನೋಟು ಅಮಾನ್ಯಕರಣದಿಂದ ಸಣ್ಣ ಹಾಗೂ ದೊಡ್ಡ ಉದ್ಯಮಗಳು ದೊಡ್ಡ ಪರಿಣಾಮ ಎದುರಿಸುತ್ತಿವೆ. ಕೃಷಿ ಕ್ಷೇತ್ರದ ಕೇಂದ್ರದ ಮೇಲೂ ಆರ್ಥಿಕ ನೀತಿಗಳು ಮೇಲೂ ದೊಡ್ಡ ಪರಿಣಾಮ ಬೀರುತ್ತಿದೆ. ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಆದಾಯ ತೆರಿಗೆ ಇಲಾಖೆ ದಬ್ಬಾಳಿಕೆ  ಅನೇಕ ಉದ್ದಿಮೆದಾರರನ್ನು ಮಾನಸಿಕವಾಗಿ ಹಿಂಸೆಗೆ ಒಳಪಡಿಸುತ್ತೀವೆ. ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪ, ಚಂದ್ರಪ್ಪ, ಜಯರಾಜ್ ಅರಸ್ ಸೇರಿದಂತೆ ಅನೇಕರು ಇದ್ದರು.

ಜಿ.ವಿ.ಸಿದ್ದಾರ್ಥ ಅವರು ಕಟ್ಟಿಬೆಳಿಸಿದ ಉದ್ಯಮದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಸ್ಥೆ ಬೆಳೆಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಿ.ವಿ.ಸಿದ್ದಾರ್ಥ ಅವರ ಉದ್ಯಮದ ಬೆಳವಣಿಗೆಗೆ ಕೈಜೋಡಿಸಬೇಕು. ಸಂಕಷ್ಟದಲ್ಲಿರುವ ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಬೇಕು. ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು.
-ಎಚ್.ಎಚ್.ದೇವರಾಜ್

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರು ಜಿ.ವಿ.ಸಿದ್ದಾರ್ಥ ಅವರು ಆರ್ಥಿಕ ನಷ್ಟದಿಂದ ಸಾವನಪ್ಪಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಬೇಜಬ್ದಾರಿ ಪ್ರದರ್ಶನ ಮಾಡಿದ್ದಾರೆ. ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಮಂತ್ರಿಗಳು ಸಿದ್ದಾರ್ಥ ಅವರ ಅಂತಿಮ ದರ್ಶನಕ್ಕೆ ಬಾರದೆ ಬೇಜಬ್ದಾರಿ ಪ್ರದರ್ಶಿಸಿದ್ದಾರೆ. ಇದನ್ನು ಜೆಡಿಎಸ್ ಖಂಡಿಸುತ್ತದೆ. ದೇಶ, ವಿದೇಶಗಳಲ್ಲಿ ನಾಡಿನ ಕೀರ್ತಿ ಪಸರಿಸಿದ ಸಾಧಕನೊಬ್ಬನ ಸಾವನ್ನು ಕೇಂದ್ರ ಸರಕಾರ ಲಘುವಾಗಿ ಪರಿಗಣಿಸಿದೆ. 
-ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News