ಚೇತನಾ ಎಸ್ಟೇಟ್‍ನಲ್ಲಿ ನೀರವ ಮೌನ: ಕುಟುಂಬಸ್ಥರಿಗೆ ನಿರ್ಮಲಾನಂದ ಸ್ವಾಮೀಜಿ ಸಾಂತ್ವಾನ
ಚಿಕ್ಕಮಗಳೂರು, ಆ.2: ಖ್ಯಾತ ಉದ್ಯಮಿ ಕಾಫಿ ಡೇ ಗ್ಲೋಬಲ್ ಲಿ. ಸಿಸಿಡಿ ಮಾಲಕ ವಿ.ಜಿ.ಸಿದ್ದಾರ್ಥ ಹುಟ್ಟಿ ಬೆಳೆದ ಮನೆಯಲ್ಲೀಗ ಸೂತಕದ ಛಾಯೆ. ಕಾಫಿ ಬೆಳೆಗಾರರು, ಉದ್ಯಮಿಗಳು, ಕಾಫಿ ಎಸ್ಟೆಟ್ ಕಾರ್ಮಿಕರು, ಸಾರ್ವಜನಿಕರಿಂದ ಸದಾ ಗಿಜುಗುಡುತ್ತಿದ್ದ ಚೇತನ ಎಸ್ಟೇಟ್‍ನಲ್ಲಿ ನೀರವ ಮೌನ ಆವರಿಸಿದೆ. ಸಣ್ಣ ಹಳ್ಳಿಯಲ್ಲಿ ಹುಟ್ಟಿ ವಿಶ್ವವಿಖ್ಯಾತನಾದ ಮನೆ ಮಗನ ಅಕಾಲಿಕ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದ ಕುಟುಂಬಸ್ಥರು ಸಿದ್ದಾರ್ಥ ಅವರ ಸಾವು ನೀಡಿದ ಶಾಕ್‍ನಿಂದ ಇನ್ನೂ ಹೊರ ಬಾರದಂತಾಗಿದೆ.
ಮೂಡಿಗೆರೆ ತಾಲೂಕಿನಲ್ಲಿರುವ ಜಿ.ವಿ.ಸಿದ್ದಾರ್ಥ ಅವರು ಬಾಲ್ಯದಲ್ಲಿ ಆಡಿ ಬೆಳೆದ ಚೇತನ ಎಸ್ಟೇಟ್‍ನಲ್ಲಿ ಅವರು ಬಿಟ್ಟು ಹೋಗಿರುವ ಹೆಜ್ಜೆಗುರುತುಗಳ ನೆನಪುಗಳು ಮಾತ್ರವಿದೆ. ಮನೆಯ ಸುತ್ತಮುತ್ತ ಸಾವಿರಾರು ಎಕರೆ ಕಾಫಿತೋಟದಲ್ಲಿ ದಿನನಿತ್ಯ ನೂರಾರು ಕಾರ್ಮಿಕರಿಂದ ಗಿಜುಗುಡುತ್ತಿದ್ದ ಮನೆಯು ಮಗನನ್ನು ಕಳೆದುಕೊಂಡು ಮೌನವಾಗಿದೆ.
ಸೋಮವಾರ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಜಿ.ವಿ.ಸಿದ್ದಾರ್ಥ ಅವರ ಮೃತದೇಹ ಬುಧವಾರ ನೇತ್ರಾವತಿ ನದಿ ಸಮುದ್ರ ಸೇರುವ ಹೊಯ್ಗೆ ಬಝಾರ್ ಸಮೀಪ ಸಿಕ್ಕ ಬಳಿಕ ಜಿಲ್ಲೆಯ ಚಟ್ನಳ್ಳಿಯಲ್ಲಿರುವ ಚೇತನ ಎಸ್ಟೇಟ್‍ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಶುಕ್ರವಾರ ಚೇತನಹಳ್ಳಿ ಎಸ್ಟೇಟ್‍ನಲ್ಲಿರುವ ಸಿದ್ದಾರ್ಥ ಅವರ ಮನೆಯಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ನರವೇರಿಸಿ ಐದನೇ ದಿನದ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಸಂಬಂಧಿಕರು ಹಾಗೂ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಸಮೀಪದಲ್ಲಿರುವ ಹೇಮಾವತಿ ನದಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಜಿ.ವಿ.ಸಿದ್ದಾರ್ಥ ಅವರ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಪುತ್ರರಾದ ಇಶಾನ್ ಹೆಗ್ಡೆ, ಅಮರ್ಥ್ಯ ಹೆಗಡೆ ವಿಧಿವಿಧಾನಗಳನ್ನು ನೆರವೇರಿಸಿದರು.
ನಿರ್ಮಲನಂದನಾಥ ಸ್ವಾಮೀಜಿ ಭೇಟಿ: ಜಿಲ್ಲೆ ಹಾಗೂ ರಾಜ್ಯದ ಖ್ಯಾತ ಉದ್ಯಮಿ ಜಿ.ವಿ.ಸಿದ್ದಾರ್ಥ ಸಾವನ್ನಪ್ಪಿದ್ದು, ಆದಿಚುಂಚನಗಿರಿ ಮಠದ ನಿರ್ಮಲನಂದನಾಥ ಸ್ವಾಮೀಜಿ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯಲ್ಲಿರುವ ಜಿ.ವಿ.ಸಿದ್ದಾರ್ಥ ಅವರ ಚೇತನ ಎಸ್ಟೇಟ್ ಮನೆಗೆ ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಿದ್ದಾರ್ಥ ಅವರ ತಾಯಿ ವಾಸಂತಿ, ಹೆಂಡತಿ ಮಾಳವಿಕಾ, ಮಕ್ಕಳಾದ ಇಶಾನ್ ಹಾಗೂ ಅಮರ್ಥ್ಯ ಸೇರಿದಂತೆ ಕುಟುಂಬಸ್ಥರು ಇದ್ದರು.
ಎಂದಿನಂತೆ ಕಾರ್ಯ ನಿರ್ವಹಿಸಿದ ಎಬಿಸಿ, ಕಾಫಿಡೇ: ನಗರದ ಕೆ.ಎಂ.ರಸ್ತೆಯಲ್ಲಿರುವ ಎಬಿಸಿ, ಕಾಫಿಡೇ ಹಾಗೂ ಸಾರಾಯು ರೆಸಾಲ್ಟ್, ಅಂಬರ್‍ವ್ಯಾಲಿ ಶಾಲೆ ಎಂದಿನಂತೆ ಕಾರ್ಯನಿರ್ವಹಿಸಿದವು. ಜಿ.ವಿ.ಸಿದ್ದಾರ್ಥ ಅವರು ಕಣ್ಮರೆಯಾಗಿದ್ದಾರೆ ಎಂಬ ಸುದ್ದಿ ಸೋಮವಾರ ಬಿತ್ತರವಾಗುತ್ತಿದ್ದಂತೆ ನಗರದಲ್ಲಿ ಅವರ ಒಡೆತನಕ್ಕೆ ಸೇರಿದ ಸಂಸ್ಥೆಗಳನ್ನು ಮುಚ್ಚಿ ಅಲ್ಲಿನ ಕಾರ್ಮಿಕರು ಶೋಕ ಸಾಗರಲ್ಲಿ ಮುಳುಗಿದ್ದರು. ಈ ಎಲ್ಲಾ ಸಂಸ್ಥೆಗಳು ಜಿ.ವಿ.ಸಿದ್ದಾರ್ಥ ಅವರ ಅಂತ್ಯಕ್ರಿಯೆ ನಡೆದ ಮರುದಿನದಿಂದಲೇ ಕಾರ್ಯಾರಂಭ ಮಾಡಿದ್ದು, ಒಡೆಯನಿಲ್ಲದ ಕಂಪೆನಿಯಲ್ಲಿ ಸೂತಕದ ಛಾಯೆಯ ಮಧ್ಯೆಯೇ ಸಿಬ್ಬಂದಿ ಎಂದಿನಂತೆ ಕಾರ್ಯಪ್ರವೃತ್ತರಾಗಿದ್ದಾರೆ. ಸಿದ್ದಾರ್ಥ ಅವರ ಒಡೆತನದಲ್ಲಿರುವ ಸಾವಿರಾರು ಎಕರೆ ಕಾಫಿತೋಟದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿರು ಎಂದಿನಂತೆ ಕೆಲಸ ಕಾರ್ಯಗಳಲ್ಲಿ ಅಳುಕಿನಿಂದಲೇ ಕಾರ್ಯನೋನ್ಮುಖರಾಗಿದ್ದಾರೆ.
ಶ್ರದ್ಧಾಂಜಲಿ: ಉದ್ಯಮಿ ಸಿದ್ದಾರ್ಥ ಹೆಗಡೆ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಗಂಗಯ್ಯ ಹೆಗ್ಡೆ ಅವರಿಂದ ನಿರ್ಮಾಣ ಮಾಡಿರುವ ವಿವೇಕಾನಂದ ಸಭಾಂಗಣದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಶ್ರದ್ದಾಂಜಲಿ ಅರ್ಪಿಸಿದರು. ಚಟ್ಟನಹಳ್ಳಿ, ಗೌತಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನರು ಶ್ರದ್ದಾಂಜಲಿ ಸಲ್ಲಿಸಿ, ಮಲೆನಾಡ ಮಾಣಿಕ್ಯನ ಸಾಧನೆಯನ್ನ ನೆನಪು ಮಾಡಿಕೊಂಡಿಕೊಂಡರು. 'ಸಿದ್ದಾರ್ಥ ಮತ್ತೊಮ್ಮೆ ಹುಟ್ಟಿ ಬನ್ನಿ' ಘೋಷಣೆ ಕೂಗಿದರು.