ಗೊರೂರು ಡ್ಯಾಮ್‍ಗೆ ಮುತ್ತಿಗೆ: ನೂರಾರು ಪ್ರತಿಭಟನಾಕಾರರ ಬಂಧನ, ಬಿಡುಗಡೆ

Update: 2019-08-02 13:36 GMT

ಹಾಸನ,ಅ.2: ಅಣೆಕಟ್ಟೆನಿಂದ ಹೇಮಾವತಿ ನದಿಗೆ ನೀರು ಬಿಡುವುದನ್ನು ನಿಲ್ಲಿಸಿ, ನಾಲೆ ಮತ್ತು ಏತ ನೀರಾವರಿ ಯೋಜನೆಯಲ್ಲಿ ನೀರು ಬಿಡುವಂತೆ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಗೊರೂರು ಡ್ಯಾಮ್‍ಗೆ ಮುತ್ತಿಗೆ ಹಾಕಿ ಒಳಗ ಪ್ರವೇಶ ಮಾಡುವಾಗ ಪೊಲೀಸರು ನೂರಾರು ಪ್ರತಿಭಟನಕಾರರನ್ನು ಬಂಧಿಸಿದ ಘಟನೆ ನಡೆದಿದೆ. 

ಮೊದಲು ಗೊರೂರು ಹೇಮಾವತಿ ಯೋಜನೆಯ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಶಾಸಕರು, ರೈತರ, ಜನ-ಜಾನುವಾರುಗಳ ಜೀವ ಉಳಿಸಲು ನೀರು ಬಿಡಬೇಕು, ಹೇಮಾವತಿ ಬಲ ಮೇಲ್ದಂಡ ನಾಲೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯ ಇಂಜಿನಿಯರ್ ಗೆ ಪತ್ರ ಬರೆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆಗಳಲ್ಲಿ ನೀರು ಇಲ್ಲದೇ ಜಾನುವಾರುಗಳು ನೀರು ಕುಡಿಯಲು ದೂರದ  ಸ್ಥಳಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕೂಡಲೇ ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಡುವುದನ್ನು ನಿಲ್ಲಿಸಿ ರೈತರ ನಾಲೆಗಳಿಗೆ ನೀರು ಹರಿಸಬೇಕು. ಕುಡಿಯುವ ನೀರು ಹಾಗೂ ಜಮೀನು ಕೆಲಸಕ್ಕೆ ನೀರಿಲ್ಲದೆ ಅರಕಲಗೂಡು ಭಾಗದ ರೈತರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಬಲದಂಡೆ ನಾಲೆಯ ಮೂಲಕ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅರ್ಧ ಮಳೆಗಾಲ ಮುಗಿದರೂ ಜಲಾಶಯ ಭರ್ತಿಯಾಗಿಲ್ಲ. ಆದರೂ ತಮಿಳುನಾಡಿಗೆ ನದಿಯ ಮೂಲಕ ನೀರು ಬಿಡಲಾಗುತ್ತಿದೆ. ರೈತರು ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ನಾವು ಕೇಳುತ್ತಿರುವುದು ಜನ ಜಾನುವಾರುಗಳಿಗಾಗಿ ಕುಡಿಯುವ ನೀರು. ಅದನ್ನೂ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಹೇಮಾವತಿ ಜಲಾಶಯ ಭರ್ತಿಯಾಗಲು ಇನ್ನೂ 30 ಅಡಿ ಬಾಕಿ ಇದೆ. ಆದರೆ ತಮಿಳುನಾಡಿಗೆ ನದಿಯ ಮೂಲಕ ನೀರು ಬಿಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರತಿಭಟನಕಾರರು, ಜಿಲ್ಲೆಯಲ್ಲಿ ಜಲಾಶಯ ಇದ್ದರೂ ರೈತರು ಮತ್ತು ಜನ ಜಾನುವಾರುಗಳು ಹನಿ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ನಂತರ ಪ್ರತಿಭಟನಾಕಾರರು ಹೇಮಾವತಿ ಜಲಾಶಯದ ಎಂಜಿನಿಯರ್ ಕಚೇರಿಯಿಂದ ಅಣೆಕಟ್ಟೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ಮುಖ್ಯದ್ವಾರದಲ್ಲೇ ತಡೆದರು. ಈ ವೇಳೆ ನಾಲೆಯ ಕ್ರಸ್ಟ್ ಗೇಟ್ ಎತ್ತಲು ಯತ್ನಿಸಿದಾಗ ಪೊಲೀಸರು ಶಾಸಕ ಎ.ಟಿ. ರಾಮಸ್ವಾಮಿ ಸೇರಿದಂತೆ ನೂರಾರು ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News