ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎಚ್.ವಿಶ್ವನಾಥ್

Update: 2019-08-02 14:14 GMT

ಹೊಸದಿಲ್ಲಿ, ಆ.2: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಪ್ರತಿನಿಧಿಸುತ್ತಿದ್ದ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾದರೂ ತಾನು ಅದರಲ್ಲಿ ಸ್ಪರ್ಧಿಸುವುದಿಲ್ಲ. ಅಷ್ಟೇ ಅಲ್ಲದೆ, ಇನ್ನು ಮುಂದೆ ಚುನಾವಣಾ ರಾಜಕೀಯದಿಂದಲೇ ದೂರವಿರುತ್ತೇನೆ ಎಂದರು.

ಜೆಡಿಎಸ್ ಪಕ್ಷದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವುದು ಸ್ವಾಗತಾರ್ಹ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ನನ್ನನ್ನು ಉಚ್ಚಾಟಿಸುವ ಅಧಿಕಾರವಿದೆ. ಆ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದಾರೆ. ರಾಜಕಾರಣದಲ್ಲಿ ನಾನು ಯಾರ ಎದುರಾದರೂ ನಿಂತು ಮಾತನಾಡಬಲ್ಲೆ. ಆದರೆ, ದೇವೇಗೌಡರನ್ನು ಎದುರಿಸಿ ನಿಂತು ಮಾತನಾಡಲು ಸಾಧ್ಯವಿಲ್ಲ ಎಂದು ವಿಶ್ವನಾಥ್ ಹೇಳಿದರು.

ಬಿಜೆಪಿ ಪಕ್ಷಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ನಾವು ಯಾರು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಪ್ರಪಂಚ ತುಂಬಾ ವಿಶಾಲವಾಗಿದೆ. ಸಮಾನ ಮನಸ್ಕ ಶಾಸಕರಾದ ನಾವು 20 ಮಂದಿ ಹೊಸ ಪಕ್ಷ ಕಟ್ಟಲು ಸಾಧ್ಯವಿಲ್ಲವೆ? ಎಂದು ಹೇಳುವ ಮೂಲಕ ವಿಶ್ವನಾಥ್ ಅಚ್ಚರಿ ಮೂಡಿಸಿದರು.

ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಕುರಿತು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂಬ ಮಾತುಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಅವರನ್ನೆ ಪ್ರಶ್ನಿಸಬೇಕು. ನನ್ನನ್ನು ಯಾಕೆ ಪ್ರಶ್ನಿಸುತ್ತಿದ್ದೀರಾ? ನಾವು ಬಿಜೆಪಿ ಸೇರುವ ಬಗ್ಗೆ ವಿಚಾರ ಮಾಡಿಲ್ಲ. ಉಪ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News