ಡಿಸಿಎಂ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟದ್ದು: ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು

Update: 2019-08-02 14:41 GMT

ಬಳ್ಳಾರಿ, ಆ. 2: ‘ನಾನು ಯಾವುದೇ ಒಂದು ಜಿಲ್ಲೆ, ಒಂದು ಸಮುದಾಯದ ಕೋಟಾಕ್ಕೆ ಸೀಮಿತವಲ್ಲ. ಬದಲಿಗೆ ರಾಜ್ಯಕ್ಕೆ ನನ್ನನ್ನು ನಾನು ಅರ್ಪಿಸಿಕೊಂಡಿದ್ದೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ’ ಎಂದು ಬಿಜೆಪಿ ಉಪಾಧ್ಯಕ್ಷ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ. ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಂಬಂಧ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಯಾವ ಜಿಲ್ಲೆಗೂ, ಯಾವ ಕೋಟಾಕ್ಕೂ ಸೀಮಿತನಲ್ಲ. ಸಚಿವ ಸ್ಥಾನ ನೀಡುವುದು ಜಿಲ್ಲೆಯ ಆಧಾರದ ಮೇಲೂ ಅಲ್ಲ. ನನ್ನಂತಹ ದೊಡ್ಡ ನಾಯಕರು, ಶಕ್ತಿವಂತ ನಾಯಕರು ಪಕ್ಷದಲ್ಲಿ ಬಹಳ ಜನರಿದ್ದಾರೆ ಎಂದರು. ಪಕ್ಷದ ಕಾರ್ಯಕರ್ತರಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಆಶಯವಿತ್ತು. ದೇವರ ಕೃಪೆಯಿಂದ ಅದು ನೆರವೇರಿದೆ. ಹೀಗಾಗಿ ಪಕ್ಷ ಏನು ನಿರ್ಧಾರ ಮಾಡುತ್ತದೋ ಅದನ್ನು ನಾವು ಪಾಲಿಸುತ್ತೇವೆ. ಡಿಸಿಎಂ ಸ್ಥಾನ ನೀಡುವ ಬಗ್ಗೆ ಪಕ್ಷ ನಿರ್ಧಾರ ಮಾಡಬೇಕು ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರು ನಮಗೆ ಸಹಾಯ ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಅವರನ್ನು ಸಮಾಧಾನಪಡಿಸಬೇಕಿದೆ ಎಂದ ಅವರು, ಉಪ ಚುನಾವಣೆ ನಡೆಯಲಿರುವ 17 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News