‘ಹಿಂಬಾಗಿಲ ಸಿಎಂ, ಅತೃಪ್ತ ಆತ್ಮಗಳ ಸರಕಾರ': ಕಾಂಗ್ರೆಸ್, ಜೆಡಿಎಸ್ ವಾಗ್ದಾಳಿ

Update: 2019-08-02 16:06 GMT

ಬೆಂಗಳೂರು, ಆ.2: ಸಚಿವ ಸಂಪುಟ ರಚನೆ ಮಾಡದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ, ಏಕ ಪ್ರದರ್ಶನ ನೀಡುತ್ತಿದ್ದಾರೆಂದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಾಗ್ದಾಳಿ ನಡೆಸಿವೆ.

ಟ್ವಿಟ್ಟರ್ ಮೂಲದ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ರಾಜ್ಯದಾದ್ಯಂತ ಬರ ಹಾಗೂ ಕೆಲವೆಡೆ ನೆರೆಯ ಪರಿಸ್ಥಿತಿ ಇದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪಅವರು ಒಂದು ವಾರವಾದರೂ ಮಂತ್ರಿಮಂಡಲವನ್ನು ರಚಿಸದೆ ಕಾಲಹರಣ ಮಾಡುವ ಮೂಲಕ ಸರಕಾರದ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದ ಜನಸಾಮಾನ್ಯರ ಪಾಲಿಗೆ ಇದು ಅತೃಪ್ತ ಆತ್ಮಗಳ ಸರಕಾರವಾಗಿದೆ ಎಂದಿದೆ.

ಅದೇ ರೀತಿ, ಕಾಂಗ್ರೆಸ್ ಸಹ ಟ್ವಿಟ್ ಮಾಡಿದ್ದು, ಹಿಂಬಾಗಿಲ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಎಲ್ಲಿ ನಿಮ್ಮ ಸಚಿವ ಸಂಪುಟ. ಆರೆಸ್ಸೆಸ್ ಮತ್ತು ಬಿಜೆಪಿಯ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಏಕೆ ತೊಂದರೆ ಕೊಡುತ್ತಿರುವಿರಿ. ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿರುವಿರೇಕೆ. ಮಂತ್ರಿಗಳಿಗಾಗಿ, ಅಭಿವೃದ್ಧಿಯ ಕೆಲಸಗಳಿಗಾಗಿ ಜನತೆ ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದೆ.

ಬಿಜೆಪಿ ಅಧಿಕಾರಕ್ಕೆ ಬಂದು ವಾರ ಕಳೆದಿದೆ. ಸಚಿವ ಸಂಪುಟ ರೂಪಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕರ್ನಾಟಕ ಇನ್ನೆಷ್ಟು ದಿನ ಬಿಜೆಪಿ ಸಂಪುಟಕ್ಕಾಗಿ ಕಾಯಬೇಕು ಎಂದು ಕಾಂಗ್ರೆಸ್ ಮಾಜಿ ಸಚಿವ ಕೃಷ್ಣ ಬೈರೇಗೌಡ ಸಹ ಟ್ವಿಟ್ಟರ್ ಮೂಲಕ ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News