ಅಲ್ಪಸಂಖ್ಯಾತರ ಸದಸ್ಯತ್ವಕ್ಕೆ ಬಿಜೆಪಿ ಅಭಿಯಾನ

Update: 2019-08-02 18:16 GMT

ಬೆಂಗಳೂರು, ಆ. 2: ಐದು ಲಕ್ಷ ಮಂದಿ ಅಲ್ಪಸಂಖ್ಯಾತರನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳುವುದು ಸೇರಿದಂತೆ ರಾಜ್ಯದಲ್ಲಿ 50 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿಯನ್ನು ಬಿಜೆಪಿ ಹೊಂದಿದ್ದು, ನಾಳೆ(ಆ.3)ಯಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸಂಚಾಲಕ ರವಿಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕೇವಲ 17 ಲಕ್ಷ ಮಂದಿ ಸದಸ್ಯರ ನೋಂದಣಿ ಆಗಿದೆ. ಹೀಗಾಗಿ ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡಲು ಆ. 3, 4 ಮತ್ತು 11ರಂದು ನಮ್ಮ ಎಲ್ಲ ಶಾಸಕರು ಮತ್ತು ಪದಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಆ.8ರಂದು ರಾಜ್ಯ ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆ ಕರೆದಿದ್ದು ಎಲ್ಲ ಮೋರ್ಚಾಗಳ ಪ್ರಮುಖರು ಹಾಗೂ ಪ್ರಕೋಷ್ಟಗಳ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಗುರಿ ನಿಗದಿಪಡಿಸಲಾಗುತ್ತದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸಭೆಯ ನೇತೃತ್ವ ವಹಿಸಲಿದ್ದಾರೆ ಎಂದರು.

ಈಗಾಗಲೇ 15 ಜಿಲ್ಲೆಗಳ ಸದಸ್ಯತ್ವ 50 ಸಾವಿರ ಮೀರಿದೆ. ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿಗೆ ನೀಡಲಾದ ಮೊಬೈಲ್‌ ಫೋನ್ ಸಂಖ್ಯೆ ಹೆಚ್ಚು ಕಾರ್ಯನಿರತವಾಗಿರುವುದರಿಂದ ನೋಂದಣಿ ನಿಧಾನಗೊಂಡಿದೆ ಎಂದ ಅವರು, ಸದಸ್ಯತ್ವವನ್ನು ಬೆಳಗ್ಗೆ ಅಥವಾ ರಾತ್ರಿ ಸಮಯದಲ್ಲಿ ನೋಂದಣಿ ಮಾಡುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News