ಹನೂರು: ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿ ಮಹಿಳೆಯರಿಂದ ಪ್ರತಿಭಟನೆ
Update: 2019-08-02 22:46 IST
ಹನೂರು, ಆ.2: ಸಮೀಪದ ಶಾಗ್ಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬಿರೋಟ ಗ್ರಾಮದ ಮಹಿಳೆಯರು ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯತ್ ಮುಂದೆ ಕುಳಿತು, ನಮ್ಮ ಗ್ರಾಮದಲ್ಲಿ ಬೋರ್ ವೆಲ್ ಇದ್ದರೂ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ನಮಗೆ ನೀರಿನ ತೊಂದರೆ ಇದ್ದು, ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗಿ ಅಲೆಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಬಳಿಕ ಶಾಗ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮು ಮಾತನಾಡಿ, ಈಗಾಗಲೆ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಗುರುವಾರ ಬೋರ್ ವೆಲ್ ಕೊರೆಸಲಾಗಿದೆ. ಆದರೆ ಅದರಲ್ಲಿ ನೀರು ಸಿಗಲಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.