ಸಿದ್ದಾರ್ಥ ಸಾವಿನ ತನಿಖೆಗಾಗಿ ನ್ಯಾಯಾಲಯದ ಮೊರೆಗೆ ನಿರ್ಧಾರ: ಕೆಜಿಎಫ್ ಮಾಜಿ ರಾಜ್ಯಾಧ್ಯಕ್ಷ ಜಯರಾಂ

Update: 2019-08-02 17:34 GMT
ಮಾಜಿ ಸಚಿವೆ ಮೋಟಮ್ಮ ಮಾತನಾಡುತ್ತಿರುವುದು

ಮೂಡಿಗೆರೆ, ಆ.2 ಕಾಫಿ ಉದ್ಯಮದ ಹರಿಕಾರ, ಸಮಾಜ ಸೇವಕ ಸಿದ್ದಾರ್ಥ ಅವರು ತಾನು ಕಂಡಂತಹ ಅತ್ಯುತ್ತಮ ಪ್ರಾಮಾಣಿಕ ಉದ್ಯಮಿಯಾಗಿ ರೂಪುಗೊಂಡವರು. ಅವರ ಸರಳತೆ ಕಾಫಿ ನಾಡಿಗೆ ಮಾದರಿಯಾಗಿದೆ. ಕಾಫಿ ಬೆಳೆಯನ್ನು ಒಂದು ಉದ್ಯಮವನ್ನಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರಿಲ್ಲದ ಕಾಫಿ ಬೆಳೆಗಾರರು ಬಡವಾಗಿದ್ದಾರೆ. ಅವರ ಅಗಲಿಕೆ ಕಾಫಿ ಉದ್ಯಮ ಹಾಗೂ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕರ್ನಾಟಕ ಬೆಳೆಗಾರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ ಹೇಳಿದರು.

ಶುಕ್ರವಾರ ಪಟ್ಟಣದ ಜೇಸಿ ಭವನದಲ್ಲಿ ಕಾಫಿ ಬೆಳೆಗಾರರ ಸಂಘ ಹಾಗೂ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಸಿದ್ದಾರ್ಥ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಾರ್ಥ ಅವರ ಅಕಾಲಿಕ ಸಾವು ಜಿಲ್ಲೆಯ ಜನತೆಗೆ ಬಹುದೊಡ್ಡ ನಷ್ಟವಾಗಿದೆ. ಪ್ರತಿಕ್ಷಣವೂ ಕಾಫಿ ನಾಡಿಗೆ ಮೋಡ ಕವಿದ ವಾತಾವರಣ ಉಂಟಾಗುತ್ತಿದೆ. ಅವರ ಅಗಲಿಕೆಯಿಂದ ಕಾಫಿ ಉದ್ಯಮ ಬಡವಾಗಿದೆ. ಸಿದ್ದಾರ್ಥ ಅವರ ನೆನಪಿಗಾಗಿ ಪಟ್ಟಣದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಅವರ ಅಸಹಜ ಸಾವಿನ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನ್ಯಾಯಾಲಯದ ಮೊರೆ ಹೋಗಲು ಬೆಳೆಗಾರರ ಸಂಘ ನಿರ್ಧರಿಸಿದೆ ಎಂದು ತಿಳಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಆದಾಯ ತೆರಿಗೆ ಇಲಾಖೆ ಡಿಜಿಯ ಕಿರುಕುಳಕ್ಕೆ ಸಿದ್ದಾರ್ಥ ಅವರು ಬಲಿಯಾಗಿರುವ ಅನುವಾನವಿದೆ. ಸರಕಾರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಗ್ಗುಬಡಿಯಲು ಮುಂದಾಗಲು ತಾಲೂಕಿನ ಸಾರ್ವಜನಿಕರು ಒಕ್ಕೂರಲಿನಿಂದ ಒತ್ತಾಯಿಸಬೇಕೆಂದ ಅವರು, ಸಿದ್ದಾರ್ಥ ಅವರ ಸಾವಿಗೆ ಸರಕಾರಿ ವ್ಯವಸ್ಥೆಯಲ್ಲಿನ ದೋಷವೂ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಇಂತಹ ದೋಷಗಳ ಪರಿಹಾರಕ್ಕೆ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ತಪ್ಪಿದಲ್ಲಿ ಉದ್ಯಮ ಕ್ಷೇತ್ರದ ಮತ್ತಷ್ಟು ಸಜ್ಜನರನ್ನು ಸಮಾಜ ಕಳೆದುಕೊಳ್ಳಬೇಕಾಗಬಹುದು ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ತಾನು ಸಚಿವೆಯಾಗಿದ್ದಾಗ ಪ್ರತಿದಿನ ನನ್ನನ್ನು ಭೇಟಿಯಾಗಿ ಮಾರ್ಗದರ್ಶನ ನೀಡಿ, ರಾಜಕೀಯದ ಹಾಗೂ ಹೋಗುಗಳಿಗೂ ಪ್ರೋತ್ಸಾಹ ನೀಡಿ ಶಬಾಷ್‍ಗಿರಿ ಹೇಳುತ್ತಿದ್ದ ಸಿದ್ದಾರ್ಥ ಅವರು, ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಅವರನ್ನು ಕಳೆದುಕೊಂಡ ನೋವು ಸಹಿಸಲಾಗುತ್ತಿಲ್ಲ ಎಂದ ಅವರು, ಜಿಲ್ಲೆ ಹಾಗೂ ಕಾಫಿ ಬೆಳೆಗಾರರಿಗೆ ಅವರು ನೀಡಿದ ಕೊಡಗೆ ಅನನ್ಯ, ಸ್ಮರಣೀಯ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಾಧಾರಣ ಸಾಧನೆ ಮಾಡಿದೆ ಅವರು, ಇಡೀ ನಾಡಿನ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ನಾಡಿನ ಉದ್ಯಮ ಕ್ಷೇತ್ರಕ್ಕೂ ಮಾದರಿಯಾಗಿದ್ದ ಅವರು, ನಿರುದ್ಯೋಗಿಗಳ ಪಾಲಿನ ಆಶಾಕಿರಣ. ಅವರ ಕುಟುಂಬಕ್ಕೆ ಭಗವಂತ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಭಾವುಕರಾಗಿ ನುಡಿದರು.

ಪ್ರಾರಂಭದಲ್ಲಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಸಿದ್ದಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣಗೌಡ, ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ, ಬಿಜೆಪಿ ಅಧ್ಯಕ್ಷ ದುಂಡುಗ ಪ್ರಮೋದ್, ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ, ತುಳುಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ, ಮುಖಂಡರಾದ ಬಿ.ಎ.ಜಗನ್ನಾಥ್, ಚಂದ್ರೇಶ್, ಡಿ.ಕೆ.ಲಕ್ಷ್ಮಣ್‍ಗೌಡ, ಜೆ.ಬಿ.ಧರ್ಮಪಾಲ, ಬಿ.ಎಂ.ಬೈರೇಗೌಡ, ಎಂ.ಎಸ್.ಅನಂತ್, ಗಣೇಶ್ ಮಗ್ಗಲಮಕ್ಕಿ, ಅರೆಕುಡಿಗೆ ಶಿವಣ್ಣ, ಎಚ್.ಕೆ.ಯೋಗೇಶ್, ಸುದರ್ಶನ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News