ಮೂಡಿಗೆರೆ: ದೇವಸ್ಥಾನ, ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು

Update: 2019-08-02 17:37 GMT

ಮೂಡಿಗೆರೆ, ಆ.2: ಪಟ್ಟಣದ ಮೊಬೈಲ್ ಅಂಗಡಿ ಹಾಗೂ ದೇವಸ್ಥಾನವೊಂದಕ್ಕೆ ರಾತ್ರಿ ವೇಳೆ ಕಳ್ಳರು ನುಗ್ಗಿ ಮೊಬೈಲ್ ಕದ್ದೊಯ್ದಿದ್ದು, ದೇವಸ್ಥಾನದ ಹುಂಡಿಯನ್ನು ಹೊಡೆಯಲು ಯತ್ನಿಸಿ ಸಾಧ್ಯವಾಗದೇ ಬರಿಗೈಯಲ್ಲಿ ತೆರಳಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಪರಿಮಳಮ್ಮ ದೇವಸ್ಥಾನದ ಎದುರಿನ ಗೇಟ್ ತೆಗೆದು ಒಳ ನುಗ್ಗಿದ ಕಳ್ಳರು ದೇವರ ವಿಗ್ರಹದ ಬಳಿಯಿರುವ ಕಾಣಿಕೆ ಹುಂಡಿಯನ್ನು ಹೊಡೆದು ಹಣ ಕಳ್ಳತನಕ್ಕೆ ಯತ್ನಿಸಿದ್ದಾರೆ. ಹುಂಡಿ ಹೊಡೆಯಲು ಸಾಧ್ಯವಾಗದಿದ್ದಾಗ ಬರಿಗೈಯಲ್ಲಿಯೇ ತೆರಳಿದ್ದಾರೆ. 

ದೇವಸ್ಥಾನ ಪಕ್ಕದ ರಸ್ತೆಯ ಬದಿಯಲ್ಲಿರುವ ಟಿ.ಎಸ್.ಮೊಬೈಲ್ ಸೆಂಟರ್ ನ ಬೀಗ ಹೊಡೆದು ಒಳ ನುಗ್ಗಿದ ಕಳ್ಳರು ದುಬಾರಿ ಬೆಲೆಯ 2 ಮೊಬೈಲ್‍ಗಳನ್ನು ಕದ್ದೊಯ್ದಿದ್ದಾರೆ. ಗುರುವಾರ ರಾತ್ರಿ 1:20 ರ ವೇಳೆ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಬಂದು ಮೊಬೈಲ್ ಅಂಗಡಿ ಬಳಿಗೆ ತೆರಳುವ ದೃಶ್ಯ ಪಕ್ಕದ ಕಟ್ಟಡದಲ್ಲಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮೊಬೈಲ್ ಸೆಂಟರ್ ಮಾಲೀಕ ತೌಸೀಫ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾರ್ವಜನಿಕರ ಆಕ್ರೋಶ: ಕಳೆದ 2 ವರ್ಷದಿಂದ ಪಟ್ಟಣ ಸೇರಿದಂತೆ ಹ್ಯಾಂಡ್‍ಪೋಸ್ಟ್ ಮತ್ತು ಬಿಳಗುಳದಲ್ಲಿ ನಿರಂತರವಾಗಿ ರಾತ್ರಿ ವೇಳೆ ಅಂಗಡಿ ಮತ್ತಿತರ ವ್ಯಾಪಾರ ಕೇಂದ್ರದ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿ ನಗ-ನಗದು ಹಾಗೂ ವಸ್ತುಗಳನ್ನು ಕದ್ದೊಯುತ್ತಿದ್ದರೂ ಪೊಲೀಸರು ಮಾತ್ರ ಏನೂ ಆಗಿಲ್ಲವೆಂಬಂತೆ ಕೈಕಟ್ಟಿ ಕುಳಿತಿದ್ದಾರೆ. ಇಂತಹ ಪೊಲೀಸರನ್ನು ನಂಬಿದರೆ ಏನೂ ಪ್ರಯೋಜನವಾಗದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

2 ವರ್ಷದಿಂದ ಸುಮಾರು 30 ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ. ಇತ್ತೀಚೆಗೆ ಬಿಳಗುಳದ ಅಗ್ರಿಮಾರ್ಟ್ ಅಂಗಡಿಗೆ ನುಗ್ಗಿ ಕೃಷಿ ಸಲಕರಣೆಗಳನ್ನು ಕದ್ದೊಯ್ದಿದ್ದರು. ಪಟ್ಟಣದ ನಾಲ್ಕೈದು ಬ್ರಾಂಡಿ ಶಾಪ್‍ಗಳಿಗೆ ನುಗ್ಗಿ ನಗದು ಹಾಗೂ ದುಬಾರಿ ಮದ್ಯವನ್ನು ಕದ್ದೊಯ್ದಿದ್ದಾರೆ. ದಿನಸಿ, ಮೊಬೈಲ್, ಹಾರ್ಡ್‍ವೇರ್, ಎಲೆಕ್ಟ್ರಾನಿಕ್ಸ್, ಹೋಟೇಲ್ ಸಹಿತ 30ಕ್ಕೂ ಅಧಿಕ ಅಂಗಡಿಗಳಿಗೆ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ. ಕಳ್ಳತನವಾದ ಕೆಲ ಅಂಗಡಿಗಳ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಕೆಲ ಅಂಗಡಿಯವರು ನೀಡಿದ ದೂರನ್ನು ಪೊಲೀಸರು ನಿರಾಕರಿಸಿದ್ದಾರೆ. ಇನ್ನೂ ಕೆಲ ಅಂಗಡಿಯ ಮಾಲಕರು ದೂರು ನೀಡಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾಗಿದ್ದಾರೆ. ಪೊಲೀಸರು ರಾತ್ರಿ ವೇಳೆ ಪಟ್ಟಣದಲ್ಲಿ ಗಸ್ತು ತಿರುಗುತ್ತಿಲ್ಲ. ಪೊಲೀಸ್ ಠಾಣೆಯ ಬಾಗಿಲು ಮುಚ್ಚಿ ಮಲಗಿಕೊಂಡಿರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ವಾಹನಗಳಲ್ಲಿ ಸಂಚರಿಸುವವರನ್ನು, ಬೈಕ್ ಸವಾರರನ್ನು ರಸ್ತೆ ಬದಿಯಲ್ಲಿ ನಿಂತು ಇನ್ನಿಲ್ಲದಂತೆ ಕಾಡಿ ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ದಂಡ ವಸೂಲಿ ಮಾತ್ರ ಬಹಳ ಅಚ್ಚುಕಟ್ಟಾಗಿ ಮಾಡುವುದನ್ನು ಬಿಟ್ಟರೆ ಕಳ್ಳರನ್ನು ಹಿಡಿಯುವುದಾಗಲಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಾಗಲಿ ರಾತ್ರಿ ಗಸ್ತು ತಿರುಗುವುದಾಗಲಿ ಮಾಡುತ್ತಿಲ್ಲ. ಇಂತಹ ಪೊಲೀಸರಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News