ಬ್ರಿಟನ್ ಸೌಂದರ್ಯ ಸ್ಪರ್ಧೆ ಗೆದ್ದ ಭಾರತೀಯ ಮೂಲದ ವೈದ್ಯೆ

Update: 2019-08-03 03:56 GMT

ಲಂಡನ್: ಭಾರತೀಯ ಮೂಲದ ವೈದ್ಯೆ ಬ್ರಿಟನ್‌ನ "ಮಿಸ್ ಇಂಗ್ಲೆಂಡ್" ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಇತರ ಹಲವು ಮಾಡೆಲ್‌ಗಳ ಸವಾಲು ಬದಿಗೊತ್ತಿ ಭಾಷಾ ಮುಖರ್ಜಿ (23) ಮಿಸ್ ಇಂಗ್ಲೆಂಡ್ ಕಿರೀಟ ತೊಟ್ಟರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಎರಡು ವೈದ್ಯಕೀಯ ಪದವಿಗಳನ್ನು ಹೊಂದಿರುವ ಡರ್ಬಿ ನಿವಾಸಿ ವೈದ್ಯೆ, 146 ಐಕ್ಯೂ ಹೊಂದಿದ್ದು, ಇವರನ್ನು ಅದ್ಭುತ ಪ್ರತಿಭಾವಂತೆ ಎಂದು ಪರಿಗಣಿಸಲಾಗಿದೆ. ಇವರು ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಗುರುವಾರ ರಾತ್ರಿ ಸ್ಪರ್ಧೆ ಪೂರ್ಣಗೊಂಡ ಕೆಲವೇ ಗಂಟೆ ಬಳಿಕ ಬೋಸ್ಟನ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಹೊಸ ಕೆಲಸ ಆರಂಭಿಸಲಿದ್ದಾರೆ ಎಂದು ವರದಿ ತಿಳಿಸಿದೆ. 

"ನಾನು ವೈದ್ಯಶಾಲೆಯಲ್ಲಿ ಅಧ್ಯಯನದಲ್ಲಿರುವ ನಡುವೆಯೇ ನನ್ನ ಸೌಂದರ್ಯ ವೃತ್ತಿ ಆರಂಭವಾಯಿತು. ಅದನ್ನು ಮುಂದುವರಿಸಬೇಕು ಎಂದು ಮನವರಿಕೆಯಾಗಲು ಒಂದಷ್ಟು ಸಮಯ ಹಿಡಿಯಿತು. ಕ್ರಮೇಣ ಓದು ಹಾಗೂ ಈ ವೃತ್ತಿಯ ಬಗ್ಗೆ ಸಮತೋಲನ ಸಾಧಿಸಲು ಸಾಧ್ಯವಾಯಿತು" ಎಂದು ಮುಖರ್ಜಿ ಸಂತಸ ಹಂಚಿಕೊಂಡರು.

ಭಾರತದಲ್ಲಿ ಹುಟ್ಟಿದ ಮುಖರ್ಜಿ ಒಂಬತ್ತು ವರ್ಷದವರಿದ್ದಾಗ ಅವರ ಕುಟುಂಬ ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡಿತ್ತು.
ವೈದ್ಯಕೀಯ ವಿಜ್ಞಾನ ಮತ್ತು ವೈದ್ಯ ಮತ್ತು ಶಸ್ತ್ರಚಿಕಿತ್ಸಾ ಪದವಿಯನ್ನು ನಾಟಿಂಗ್‌ ಹ್ಯಾಂ ವಿಶ್ವವಿದ್ಯಾನಿಲಯದಿಂದ ಅವರು ಪಡೆದಿದ್ದಾರೆ. ಮಿಸ್ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿರುವ ಅವರು, ಮಿಸ್ ವರ್ಲ್ಡ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ ಹಾಗೂ ಮಾರಿಷಿಯಸ್‌ಗೆ ವಿಹಾರ ಪ್ಯಾಕೇಜ್ ಗಿಟ್ಟಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News