ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ತಯಾರಕರ ಧರಣಿ

Update: 2019-08-03 13:42 GMT

ದಾವಣಗೆರೆ, ಆ.3: ಬಿಸಿಯೂಟ ತಯಾರಕರಿಗೆ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್, ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ತಮ್ಮ ದೈನಂದಿನ ಕಾರ್ಯವನ್ನು ಸ್ಥಗಿತಗೊಳಿಸಿ ನಗರದಲ್ಲಿ ಶನಿವಾರ ಪ್ರತಿಭಟಿಸಿದರು. 

ನಗರದ ಶ್ರೀ ಜಯದೇವ ವೃತ್ತದಲ್ಲಿ ಫೆಡರೇಷನ್ ನೇತೃತ್ವದಲ್ಲಿ ಸೇವಾ ಭದ್ರತೆ ಕಲ್ಪಿಸುವುದು, ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ಬಿಸಿಯೂಟ ತಯಾರಕ ಮಹಿಳೆಯರು ಮುತ್ತಿಗೆ ಹಾಕಿದರು. 
ಈ ವೇಳೆ ಮಾತನಾಡಿದ ಫೆಡರೇಷನ್ ರಾಜ್ಯ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಕಳೆದ 17 ವರ್ಷದಿಂದಲೂ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಸೌಲಭ್ಯ ವಂಚಿತರಾಗಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳೆರೆಡೂ ಸೇರಿ ನೀಡುವ ಗೌರವ ಸಂಭಾವನೆ ಮುಖ್ಯ ಅಡುಗೆಯವರಿಗೆ 2700 ರೂ., ಅಡುಗೆ ಸಹಾಯಕರಿಗೆ 2600 ರು.ಗೆ ಸಿಗುತ್ತಿದೆ. ಇದರಿಂದ ಜೀವನ ನಡೆಸುವುದೇ ಕಷ್ಟ ಎಂದರು. 

ಸರ್ಕಾರಗಳು ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಬಿಸಿಯೂಟ ತಯಾರಕ ಮಹಿಳೆಯರಿಗೆ ಕೆಲಸದ ಭದ್ರತೆ ಒದಗಿಸಬೇಕು. ವೇತನ ಹೆಚ್ಚಿಸಬೇಕು. ಬಿಸಿಯೂಟ ಪೂರೈಕೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಹುನ್ನಾರವನ್ನು ಸರ್ಕಾರ ಕೈಬಿಡಬೇಕು. ಒಂದು ವೇಳೆ ಬಿಸಿಯೂಟ ಪೂರೈಸಲು ಖಾಸಗಿಯವರಿಗೆ ವಹಿಸಿದರೆ ರಾಜ್ಯದ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1.18 ಲಕ್ಷ ಬಿಸಿಯೂಟ ತಯಾರಕ ಮಹಿಳೆಯರು ಅಕ್ಷರಶಃ ಬೀದಿ ಪಾಲಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

ಗೌರವ ಧನಕ್ಕೆ ಕೆಲಸ ಮಾಡುತ್ತಿರುವ ಬಡ ಹೆಣ್ಣು ಮಕ್ಕಳನ್ನು ಬೀದಿ ಪಾಲು ಮಾಡುವ ಕೆಲಸ ಯಾವುದೇ ಸರ್ಕಾರಕ್ಕೂ ಶೋಭೆ ತರುವುದಿಲ್ಲ. ಜನರಿಗೆ ಕೆಲಸ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಬಿಸಿಯೂಟ ಜವಾಬ್ದಾರಿ ವಹಿಸಬಾರದು, ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ನೀಡಿ, ಸೇವಾ ಭದ್ರತೆ ಕಲ್ಪಿಸಬೇಕು. ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಯಾಗಿ ಪರಿವರ್ತಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನಂದೇ ವೇತನ ನೀಡಿ, ಪಿಎಫ್, ಇಎಸ್‍ಐ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು. 

ಬಿಸಿಯೂಟ ಯೋಜನೆ ಎಂಬುದನ್ನು ಕೈಬಿಟ್ಟು, ಬಿಸಿಯೂಟ ನಿರಂತರ ಕಾರ್ಯಕ್ರಮವಾಗಿ ಬದಲಾಯಿಸಬೇಕು. ಬಿಸಿಯೂಟ ತಯಾರಕರಿಗೆ 2 ಲಕ್ಷ ರೂ. ಅಪಘಾತ ಪರಿಹಾರ ಹಾಗೂ 5 ಲಕ್ಷ ರೂ. ಮರಣ ಪರಿಹಾರ ನೀಡಬೇಕು. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕೊಟ್ಟಿರುವ ಬಿಸಿಯೂಟ ಪೂರೈಕೆಯನ್ನು ತಕ್ಷಣವೇ ಹಿಂಪಡೆಯಬೇಕು. ದಸರಾ ರಜೆ, ಬೇಸಿಗೆ ರಜೆ ವೇಳೆಯೂ ಬಿಸಿಯೂಟ ತಯಾರಕರಿಗೆ ವೇತನ ನೀಡಬೇಕು. 60 ವರ್ಷ ವಯಸ್ಸಾದ ಬಿಸಿಯೂಟ ತಯಾರಕರಿಗೆ 3 ಸಾವಿರ ರೂ. ನಿವೃತ್ತಿ ಪಿಂಚಣಿ, 2 ಲಕ್ಷ ರೂ. ಇಡುಗಂಟು ಹಣ ನೀಡುವಂತೆ ಒತ್ತಾಯಿಸಿದರು. 

ಸಂಘಟನೆ ಮಖಂಡರಾದ ಆನಂದರಾಜ, ಐರಣಿ ಚಂದ್ರು, ಅಂಜಿನಪ್ಪ ಲೋಕಿಕೆರೆ, ರುದ್ರಮ್ಮ ಬೆಳಲಗೆರೆ, ಮಹಮ್ಮದ್ ಬಾಷಾ, ಆವರಗೆರೆ ಚಂದ್ರು, ಸಿ.ರಮೇಶ್, ಚನ್ನಮ್ಮ, ಸರೋಜ, ಕೆ.ಸಿ.ಜ್ಯೋತಿಲಕ್ಷ್ಮಿ, ಲಲಿತಮ್ಮ ಹೊನ್ನಾಳಿ, ಪ್ರಮೀಳಾ ಹರಿಹರ, ಚನ್ನಮ್ಮ ಜಗಳೂರು, ಗದುಗೇಶ, ಜಯಮ್ಮ ಮಳಲ್ಕೆರೆ, ಎಚ್.ಆರ್.ಮೀನಾಕ್ಷಮ್ಮ, ವನಜಾಕ್ಷಮ್ಮ, ಜಯಮ್ಮ ನ್ಯಾಮತಿ, ಮಂಜುಳಾ, ಗೀತಾ, ಎಚ್.ಎಲ್.ಪ್ರೇಮ, ಪಾರ್ವತಿ ಬಾಯಿ, ಕುಮಲಾ ಬಾಯಿ, ಕೆ.ಎಚ್.ನಾಗಮ್ಮ, ಮೀನಾಕ್ಷಿ, ಜಯಮ್ಮ, ತುಳಸಮ್ಮ, ಗೀತಾ, ಲಕ್ಷ್ಮಮ್ಮ, ಯಲ್ಲಮ್ಮ, ಪ್ರೇಮಾವತಿ, ಸುಶೀಲಮ್ಮ, ನಾಗಮ್ಮ, ದೇವಮ್ಮ, ಎಸ್.ಶಾಂತಮ್ಮ, ಚಂದ್ರಕಲಾ, ಕವಿತಾ, ಚಂದ್ರಮ್ಮ, ಸೀತಾವಾಣಿ, ಪ್ರೇಮಾ, ಪಾರ್ವತಮ್ಮ, ಚಂದ್ರಮ್ಮ, ಮಂಜಮ್ಮ, ಎಂ.ಎಚ್.ಹನುಮಂತಮ್ಮ, ಪ್ರೇಮ, ಕಮಲ, ನೇತ್ರಾವತಿ, ವಸಂತ, ಶಬೀನಾ, ಸರೋಜಾ, ಅನಿತಾ ಇತರರು ಇದ್ದರು. ನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News