ರಾಜಕೀಯದಿಂದ ಹಿಂದೆ ಸರಿಯಬೇಕು ಎಂದುಕೊಂಡಿದ್ದೇನೆ: ಮಾಜಿ ಸಿಎಂ ಕುಮಾರಸ್ವಾಮಿ

Update: 2019-08-03 14:39 GMT

ಹಾಸನ, ಆ.3: ದೇವರು ಕೊಟ್ಟ ಅವಕಾಶದಲ್ಲಿ ಎರಡು ಬಾರಿ ಸಿಎಂ ಆಗಿದ್ದು, ಮುಂದೆ ಈ ರಾಜಕೀಯ ವ್ಯವಸ್ಥೆಯಲ್ಲಿ ನಾನೇ ಹಿಂದೆ ಸರಿಯಬೇಕು ಎಂದು ಕೊಂಡಿದ್ದು, ರಾಜಕೀಯದಲ್ಲೇ ಮುಂದುವರೆಯಬೇಕು ಎನ್ನುವ ಹುಚ್ಚಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನರ ಆಶೀರ್ವಾದದಿಂದ ನಾನು ಎರಡು ಬಾರಿ ಸಿಎಂ ಆಗಿದ್ದು, ಇದು ನನಗೆ ದೇವರು ಕೊಟ್ಟ ಅವಕಾಶ. ನಾನು ಆಕಸ್ಮಿಕವಾಗಿ ಈ ರಾಜ್ಯದ ಸಿಎಂ ಆಗಿ ಬಂದವನು. ಈ ರಾಜಕೀಯ ವ್ಯವಸ್ಥೆಯಲ್ಲಿ ನಾನೇ ಹಿಂದೆ ಸರಿಯಬೇಕು ಎಂದು ಕೊಂಡಿದ್ದೇನೆ. ನನಗೆ ರಾಜಕೀಯದಲ್ಲಿ ಮುಂದುವರೆಯಲೇಬೇಕೆಂಬ ಹುಚ್ಚಿಲ್ಲ ಎಂದು ತಿಳಿಸಿದರು. 

ರಾಜಕೀಯದಲ್ಲಿ ಅಧಿಕಾರಕ್ಕಿಂತ ನನಗೆ ಜನತೆಯ ಹಿತ ಮುಖ್ಯ, ಇಂದು ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟು ಕುತಂತ್ರದ ರಾಜಕೀಯ ನಡೆಯುತ್ತಿದೆ. ಜಾತಿ, ಪ್ರಭಾವದಿಂದ ರಾಜಕೀಯ ನಡೆಯುತ್ತಿದ್ದು, ನನ್ನ ಕುಟುಂಬವನ್ನು ಪದೇ ಪದೇ ಎಳೆದು ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನೂತನ ಸರ್ಕಾರ ಬಂದು ಒಂದು ವಾರವಷ್ಟೇ ಆಗಿದ್ದು, ಯಾರೂ ಮಾಡದಂತಹ ಕೆಲಸಗಳು ಪ್ರಾರಂಭವಾಗಿವೆ. ಸ್ವಲ್ಪ ಕಾದು ನೋಡೋಣ ಎಂದು ಲೇವಡಿ ಮಾಡಿದರು.

ಯಾವುದೇ ಸರಕಾರ ಬಂದಾಗ ಅಧಿಕಾರಿಗಳ ವರ್ಗಾವಣೆ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ವರ್ಗಾವಣೆ ಮಾಡಿ ಪೋಸ್ಟಿಂಗ್ ಕೊಡದೆ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಎರಡೆರಡು ಹುದ್ದೆ ತೋರಿಸಿ ರದ್ದು ಮಾಡಿದ್ದಾರೆ. ಇದು ಅಧಿಕಾರಿಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದ ಅವರು, ಆರು ತಿಂಗಳ ನಂತರ ರಾಜಕೀಯ ಸ್ಥಿತಿ ಬದಲಾಗುತ್ತದೆ ಎಂದು ಭವಿಷ್ಯ ನುಡಿದರು. 

ಹುಣಸೂರು, ಕೆ.ಆರ್.ಪೇಟೆ ಹಾಗೂ ಇನ್ನುಳಿದ ಹದಿನೈದು ಕ್ಷೇತ್ರಗಳಲ್ಲಿ ನಮ್ಮ ಬಲಾಢ್ಯ ಕಾರ್ಯಕರ್ತರಿದ್ದು, ಪ್ರಜ್ವಲ್, ನಿಖಿಲ್ ಹೆಸರು ತೇಲಿ ಬಿಟ್ಟಿದ್ದಾರೆ. ಕೆಲ ಮಾಧ್ಯಮಗಳು ನಿಖಿಲ್ ರಾಜಕೀಯ ಬೆಳವಣಿಗೆಯನ್ನು ಕುಂಠಿತಗೊಳಿಸಿದರು. ಇನ್ನೂ ಐದು ವರ್ಷ ಸಿನಿಮಾ ರಂಗದಲ್ಲಿ ಮುಂದುವರೆಯುವಂತೆ ನಾನು ಹೇಳಿದ್ದೆ. ಮಾಧ್ಯಮಗಳಿಗೂ ಒಂದು ಇತಿ ಮಿತಿ ಇದೆ. ನಿಮ್ಮ ತೆವಲುಗಳಿಗೆ ಸ್ಟೋರಿಗಳನ್ನು ಮಾಡುವುದನ್ನು ನಿಲ್ಲಿಸಿ ನಿಮ್ಮ ಘನತೆ, ಗೌರವವಗಳನ್ನು ಉಳಿಸಿಕೊಳ್ಳಿ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News