ಬಡವರ ನೆರವಿಗೆ ನನ್ನನ್ನು ಬಿಟ್ಟು ನಿಮ್ಮ ಬಿಎಸ್‌ವೈ ಬರಲ್ಲ, ಸಿದ್ದರಾಮಯ್ಯನೂ ಬರಲ್ಲ: ಕುಮಾರಸ್ವಾಮಿ

Update: 2019-08-03 16:06 GMT

ವೃದ್ಧಾಶ್ರಮ ನಿರ್ಮಾಣ ಮಾಡಿ, ವೃದ್ಧರ ಜೊತೆ ಬದುಕಲು ಚಿಂತಿಸಿದ್ದೇನೆ

ಮಂಡ್ಯ, ಆ.3: ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಇತರ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ, ಯಾವ ಪಕ್ಷದ ಜತೆಗೂ ಮೈತ್ರಿ ಬೇಡವೆಂದು ಕಾರ್ಯಕರ್ತರು ತಾಕೀತು ಮಾಡಿದಾಗ, ಯಾವ ಪಕ್ಷದ ಜತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಮಾಧಾನಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ನಮಗೆ ಹಿನ್ನಡೆಯಾಯಿತು. ಆದ್ದರಿಂದ ಮುಂದೆ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಬೇಡವೇ ಬೇಡ ಎಂದು ಕಾರ್ಯಕರ್ತರು ಹೇಳಿದರು.

ಯಡಿಯೂರಪ್ಪ ವಿರುದ್ಧ ವಾಗ್ದಾಳಿ
ಮಂತ್ರಿಮಂಡಲವಿಲ್ಲದೆ ಯಡಿಯೂರಪ್ಪ ಏಕಾಂಗಿಯಾಗಿದ್ದಾರೆ. ಸರಕಾರ ರಚನೆಯಾಗಿ 10 ದಿನಗಳಾಗಿವೆ. ಇನ್ನೂ ಮಂತ್ರಿಮಂಡಲ ರಚನೆಯಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹವಾಗಿದೆ. ಆ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಕೇವಲ ಮುಖ್ಯಮಂತ್ರಿಯಾಗಿ ಎಲ್ಲಾ ಕಡೆ ಹೇಗೆ ಓಡಾಡಿ ಸಮಸ್ಯೆ ಬಗೆಹರಿಸುತ್ತಾರೋ ನೋಡೋಣ ಎಂದು ಕುಮಾರಸ್ವಾಮಿ ಟೀಕಿಸಿದರು.

ಪ್ರತಿನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ. ಒಕ್ಕಲಿಗ ಅಧಿಕಾರಿಗಳನ್ನು ಚೆಂಡಾಡ್ತಿದ್ದಾರೆ. ಐಪಿಎಸ್ ಅಧಿಕಾರಿ ರವಿಕಾಂತೇಗೌಡರನ್ನು ಯಾಕಪ್ಪ ಎತ್ತಂಗಡಿ ಮಾಡಿದೆ? ಯಾವ ತಪ್ಪು ಕೆಲಸ ಮಾಡಿದ್ದಕ್ಕೆ ತೆಗೆದೆ ? ಕುಮಾರಸ್ವಾಮಿ ಅಭಿಮಾನಿ ಎಂದು ಎತ್ತಂಗಡಿ ಮಾಡಿದೆಯಾ ? ಎಂದು ಯಡಿಯೂರಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಬಡ ಕುಟುಂಬಗಳಿಗಾಗಿ ನಾನು ರಾಜಕೀಯ ಮಾಡಿದ್ದೇನೆ. ಯಡಿಯೂರಪ್ಪ ರೀತಿ ಜೈಲಿಗೆ ಹೋಗಲು ರಾಜಕೀಯ ಮಾಡಿಲ್ಲ. ಬಡ ಕುಟುಂಬಗಳ ನೆರವಿಗೆ ನನ್ನನ್ನು ಬಿಟ್ಟು ಬೇರೆ ಯಾರೂ ಬರಲ್ಲ. ನಿಮ್ಮ ಯಡಿಯೂರಪ್ಪನೂ ಬರಲ್ಲ, ಸಿದ್ದರಾಮಯ್ಯನೂ ಬರಲ್ಲ ಎಂದು ಅವರು ಹೇಳಿಕೊಂಡರು.

ಲೋಕಸಭಾ ಚುನಾವಣೆ ವೇಳೆ ಅಪ್ಪ-ಮಗ ನಮ್ಮ ಬಗ್ಗೆ ಅಪಪ್ರಚಾರ ಮಾಡಿದರು. ಅವರಿಂದಾಗಿಯೇ ನನ್ನ ಮಗ ಸೋಲಬೇಕಾಯಿತು ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತು ಅವರ ಮಗ ಚೇತನ್ ವಿರುದ್ಧವೂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳ ವಿರುದ್ಧ ಕಿಡಿ: ನಾನು ಮುಖ್ಯಮಂತ್ರಿಯಾದ ದಿನದಿಂದಲೂ ಮೈತ್ರಿ ಸರಕಾರ ಕೆಡವಲು ಕೆಲ ಮಾಧ್ಯಮಗಳು ಮುಂದಾದವು. ಸರಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಪ್ರಚುರಪಡಿಸದೆ, ಕೇವಲ ಆಪರೇಷನ್ ಕಮಲ ಹಾಗೂ ಸರಕಾರದ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಮಾಡಿದವು ಎಂದು ಮತ್ತೆ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ನನ್ನ ಮಗ ನಿಖಿಲ್‍ಗೆ ಲೋಕಸಭಾ ಚುನಾವಣೆಯಲ್ಲಿ ನಿಲ್ಲಬೇಡ ಎಂದು ಹೇಳಿದ್ದೆ. ಜಿಲ್ಲೆಯ ಶಾಸಕರೇ ಒತ್ತಾಯ ಹಾಕಿ ನಿಲ್ಲಿಸಿದರು. ನನ್ನ ಮತ್ತು ನನ್ನ ಮಗನನ್ನು ಮಾಧ್ಯಮಗಳು ಪ್ರತಿನಿತ್ಯ ಖಳನಾಯಕನನ್ನಾಗಿ ಬಿಂಬಿಸಿದವು ಎಂದು ಬೇಸರ ವ್ಯಕ್ತಪಡಿಸಿದರು. ನನಗೆ ಅಧಿಕಾರಕ್ಕಿಂತ ಜನರ ಪ್ರೀತಿ ಮುಖ್ಯ. ನಾನು ನಿಮಗೆ ಎಂದೂ ದ್ರೋಹ ಮಾಡಿಲ್ಲ. ನಾನು ಸಂಪಾದಿಸಿದ ಕೇತೋಗಾನಹಳ್ಳಿ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಾಣ ಮಾಡಿ, ವೃದ್ಧರ ಜೊತೆ ಬದುಕಲು ಚಿಂತಿಸಿದ್ದೇನೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆ ವೇಳೆ ನಾಲೆಗಳಲ್ಲಿ ನೀರು ಬಿಟ್ಟಿದ್ದಕ್ಕೆ ಸ್ವಾಭಿಮಾನಿಗಳೆನಿಸಿಕೊಂಡವರು ಚುನಾವಣಾ ಆಯೋಗದ ಮೂಲಕ ನೊಟೀಸ್ ಕೊಡಿಸಿದರು ಎಂದು ಸಂಸದೆ ಸುಮಲತಾ ವಿರುದ್ಧ ಪರೋಕ್ಷವಾಗಿ ಕುಮಾರಸ್ವಾಮಿ ಹರಿಹಾಯ್ದರು. ಈ ಕ್ಷೇತ್ರದ ಜನ ಹಿಂದಿನಿಂದಲೂ ದೇವೇಗೌಡರ ಜೊತೆ ಇದ್ದಾರೆ. ಇವತ್ತು ನಮ್ಮನ್ನು ಬಿಟ್ಟು ಹೋದವನ(ನಾರಾಯಣಗೌಡ) ಬಗ್ಗೆ ಮಾತಾಡಲ್ಲ. ಈ ರಾಜಕಾರಣದಲ್ಲಿ ನಮ್ಮ ಕುಟುಂಬದ ಸ್ವಯಂಕೃತ ಅಪರಾಧವಿದೆ ಎಂದು ಕುಮಾರಸ್ವಾಮಿ ಮಾಜಿ ಶಾಸಕ ನಾರಾಯಣಗೌಡ ವಿರುದ್ಧ ಕಿಡಿಕಾರಿದರು.

ನಾರಾಯಣಗೌಡ ಒಬ್ಬ ಕ್ರಿಮಿನಲ್. ಅಂತಹ ಕ್ರಿಮಿನಲ್ ಈ ಜಿಲ್ಲೆಯೊಳಗೆ ಇನ್ನೊಬ್ಬ ಸಿಗಲ್ಲ. ಇಲ್ಲಿ ಜನರ ವಿಶ್ವಾಸ ಗಳಿಸಲು ನಾನು ಕಣ್ಣೀರಿಟ್ಟಿಲ್ಲ. ಎಲ್ಲಾ ಕ್ಷೇತ್ರಕ್ಕಿಂತ ಹೆಚ್ಚು ಹಣವನ್ನು ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಾನು ಕೊಟ್ಟೆ. ಚುನಾವಣಾ ವೆಚ್ಚಕ್ಕಾಗಿ ಹಣ ಕೊಟ್ಟೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಹಣ ಕೊಟ್ಟೆ. ಈತ ಮೃತ ರೈತರ ಕುಟುಂಬಕ್ಕೆ ಹಣ ಕೊಟ್ಟದ್ದಾನ ಕೇಳಿ. ಆತನದ್ದು ಸುಳ್ಳಿನ ರಾಜಕೀಯ ಎಂದು ಕಣ್ಣೀರಿಟ್ಟರು.

ಕೇವಲ 17 ಕ್ಷೇತ್ರಕ್ಕೆ ಚುನಾವಣೆ ಬರುತ್ತೋ, 224 ಕ್ಷೇತ್ರಗಳಿಗೂ ಬರುತ್ತೋ ಗೊತಿಲ್ಲ. ಯಾವುದೇ ಚುನಾವಣೆ ಬರಲಿ, ಎಲ್ಲದಕ್ಕೂ ಸಿದ್ಧರಾಗಿ ಎಂದು  ಅವರು ಇದೇ ವೇಳೆ ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾರಾಯಣಗೌಡನಂತಹ ಸೇಲ್ಸ್ ಮನ್‍ನಿಂದ ಈ ಪಕ್ಷ ಬೆಳೆಯಬೇಕಿಲ್ಲ. ನಿಮ್ಮಂತಹ ನಿಷ್ಟಾವಂತ ಕಾರ್ಯಕರ್ತರಿಂದ ಈ ಪಕ್ಷ ಬೆಳೆದು ನಿಂತಿದೆ. ನಿಮ್ಮೆಲ್ಲರ ಅಭಿಪ್ರಾಯದಂತೆ ಉಪಚುನಾವಣೆಗೆ ಸ್ಥಳೀಯ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಸುಳ್ಳು. ಸ್ಥಳೀಯವಾಗಿಯೇ ಪ್ರಬಲ ನಾಯಕರನ್ನು ಹುಟ್ಟು ಹಾಕುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News