"ಪೊಲೀಸ್ ಕರ್ತವ್ಯ ಹೊಣೆಗಾರಿಕೆ ಅರಿಯಲು ‘ಸ್ಟುಡೆಂಟ್ ಪೊಲೀಸ್ ಕೆಡೆಟ್ ತರಬೇತಿ’ ಸಹಕಾರಿ"

Update: 2019-08-03 16:24 GMT

ಧಾರವಾಡ, ಆ.3: ಪೊಲೀಸ್ ಕರ್ತವ್ಯ, ಶಿಸ್ತು, ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿ ಪೊಲೀಸ್ ಕೆಡೆಟ್ ತರಬೇತಿಯು ಶಾಲಾ ಮಕ್ಕಳಿಗೆ ಬುನಾದಿಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ತಿಳಿಸಿದರು. 

ನಗರದ ಸಾಧನಕೇರಿ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ರಾಜ್ಯ ಸರಕಾರ, ರಾಜ್ಯ ಪೋಲಿಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು 300 ಶಾಲೆಗಳ ಪೈಕಿ, ಧಾರವಾಡ ಜಿಲ್ಲೆಯಲ್ಲಿ 8 ಪ್ರೌಢಶಾಲೆಗಳನ್ನು ಆಯ್ಕೆ ಮಾಡಿದೆ. ಪ್ರತಿ ಶಾಲೆಯಲ್ಲಿ 44 ವಿದ್ಯಾರ್ಥಿಗಳಿಗೆ ವಾರದ ಪ್ರತಿ ಶನಿವಾರ ಪೊಲೀಸ್ ಅಧಿಕಾರಿಗಳಿಂದ ತರಬೇತಿ ನೀಡಲಾಗುವುದೆಂದು ಅವರು ಹೇಳಿದರು.

ಧಾರವಾಡ ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೇರ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಮತ್ತು ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ದೈಹಿಕ, ಮಾನಸಿಕ ಚಟುವಟಿಕೆಗಳು ಅವನತಿ ಹೊಂದುತ್ತಿವೆ. ಇದರಿಂದ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡದ ಸಂದರ್ಭದಲ್ಲಿ ಪೊಲೀಸ್ ತರಬೇತಿ ಮಹತ್ವದ್ದಾಗಿದೆ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.

ರಾಷ್ಟ್ರದ ಸತ್ಪ್ರಜೆಗಳಾಗಲು ಮತ್ತು ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಅಣಿಯಾಗಲು ಇಂತಹ ತರಬೇತಿಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಮ್‌ಸಿ ಅಧ್ಯಕ್ಷ ಚನ್ನಬಸಪ್ಪಲಗಮಣ್ಣವರ ಹೇಳಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಸ್.ಆರ್.ಧರೆಪ್ಪನವರ, ಪ್ರಭಾರಿ ಮುಖ್ಯೋಪಾಧ್ಯಾಯಿನಿ ಗ್ಲ್ಯಾಡಿಸ್ ಫರ್ನಾಂಡಿಸ್, ಪ್ರಕಾಶ ಭೂತಾಳಿ, ಶ್ರೀಮಂತ ಹಡಗುರ, ಎಸ್‌ಡಿಎಮ್‌ಸಿ ಸದಸ್ಯರು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News