ಕಡೂರು: ಟಿಪ್ಪು ಜಯಂತಿ ಆಚರಣೆ ರದ್ದು ಖಂಡಿಸಿ ಪ್ರತಿಭಟನೆ

Update: 2019-08-03 17:39 GMT

ಕಡೂರು, ಆ.3: ದ್ವೇಷ ರಾಜಕಾರಣದ ಮೂಲಕ ಟಿಪ್ಪು ಜಯಂತಿ ಸರಕಾರಿ ಆಚರಣೆಯನ್ನು ರದ್ದುಪಡಿಸಿ ಆರೆಸ್ಸೆಸ್ ಸಂಘಟನೆಗಳ ಮೆಚ್ಚುಗೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಓಲೈಕೆಯ ರಾಜಕಾರಣ ನಡೆಸುವ ಕಾರ್ಯವೈಖರಿ ಖಂಡನೀಯ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಆರೋಪಿಸಿದರು.

ಅವರು ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಟಿಪ್ಪು ಜಯಂತಿಯನ್ನು ರದ್ದು ಪಡಿಸಿದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತದಲ್ಲಿ ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ಆದೇಶ ನೀಡಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ಬಂದು 8 ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಪಡಿಸಿರುವುದು ಖಂಡನೀಯ ಎಂದರು.

ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡುವುದರ ಮೂಲಕ ಟಿಪ್ಪು ಅಭಿಮಾನಿಗಳಿಗೆ ದ್ರೋಹ ವೆಸಗಿದ್ದಾರೆ. ಇದೇ ಯಡಿಯೂರಪ್ಪ ಅವರು ಕೆಜೆಪಿ ಪಕ್ಷದಲ್ಲಿ ಇದ್ದಾಗ ಟಿಪ್ಪುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಈಗ ಬಿಜೆಪಿ ಮುಖ್ಯಮಂತ್ರಿಯಾಗಿ ಟಿಪ್ಪು ಒಬ್ಬ ದೇಶದ್ರೋಹಿ, ಮತಾಂಧ ಎಂಬ ಹಣೆಪಟ್ಟಿಯನ್ನು ಕಟ್ಟುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಿ ದಾರ್ಶನಿಕರ ಜಯಂತಿ ಆಚರಣೆಗೆ ಬುನಾದಿ ಹಾಕಿದರು. ಟಿಪ್ಪು ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಸರ್ವ ಜನರ ಅಭಿವೃದ್ದಿಗಾಗಿ ತನ್ನ ಆಡಳಿತದ ಅವಧಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿರುವ ಇತಿಹಾಸವನ್ನು ಬಿಜೆಪಿ ಪಕ್ಷದ ಮುಖಂಡರು ಅರ್ಥೈಸಿಕೊಳ್ಳಬೇಕಿದೆ ಎಂದರು.

ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಉಮೇಶ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂಧಿ ಕಲ್ಲೇಶ್, ಜಿ.ಪಂ. ಸದಸ್ಯ ಶರತ್‍ ಕೃಷ್ಣಮೂರ್ತಿ, ಮಸೀದಿ ಅಧ್ಯಕ್ಷ ಮೆಹಬೂಬ್ ಖಾನ್, ಪುರಸಭಾ ಸದಸ್ಯರಾದ ಸೈಯಾದ್‍ ಯಾಸೀನ್, ಸೈಯಾದ್‍ ಇಕ್ಬಾಲ್, ಶ್ರೀಕಾಂತ್, ಹಾಲಮ್ಮ, ಜ್ಯೋತಿ ಆನಂದ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕಲೀಮುಲ್ಲಾ ಷರೀಫ್, ತಾ.ಪಂ. ಅಧ್ಯಕ್ಷೆ ಭಾರತಿ ಪ್ರಹ್ಲಾದ್, ಎನ್. ಬಷೀರ್ ಸಾಬ್, ಮುಖಂಡರಾದ ಯಳ್ಳಂಬಳಸೆ ತಮ್ಮಯ್ಯಪ್ಪ, ಸಾವಿತ್ರಿಗಂಗಪ್ಪ, ಜಿಮ್ ಶ್ರೀನಿವಾಸ್, ನಿರಂಜನ್, ಆರೀಫ್, ಅಮೀರ್‍ಜಾನ್, ವಿನಯ್‍ವಳ್ಳು, ಕೆ.ಎನ್. ವಿನಾಯಕ್, ಪಂಗ್ಲಿಮಂಜು ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News