ಟಿಪ್ಪು ಜಯಂತಿ ಆಚರಣೆ ರದ್ದು ಹಿಂಪಡೆಯಲು ಒತ್ತಾಯಿಸಿ ಧರಣಿ

Update: 2019-08-03 17:53 GMT

ಮೈಸೂರು,ಆ.3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಜಾರಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದು ಪಡಿಸಿದ ರಾಜ್ಯ ಬಿಜೆಪಿ ಸರಕಾರದ ನಿರ್ಧಾರವನ್ನು ಖಂಡಿಸಿ, ರದ್ದು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಟಿಪ್ಪು ಜಯಂತಿ ಆಚರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ನಡೆಯಲ್ಲಿ ಪ್ರತಿಭಟನಾಕಾರರು ಖಂಡಿಸಿದರು. ಈ ವೇಳೆ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ರಾಜ್ಯದಲ್ಲಿ ತಲೆದೂರಿರುವ ಬರಗಾಲ ನೀರಿನ ಸಮಸ್ಯೆ ಉದ್ಯೋಗ ಸಮಸ್ಯೆ ಇನ್ನಿತರ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅಭಿವೃದ್ದಿ ಕಾರ್ಯಗಳ ಕುರಿತು ಚಿಂತನೆ ನಡೆಸದೆ ಅಲ್ಪಸಂಖ್ಯಾತ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದು, ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಯಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿ ಜಾರಿ ವಿರೋಧಿ ಎಂದು ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ನಡೆಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಯಾಗಿದ್ದ ಜನಪರ ಯೋಜನೆಗಳನ್ನು ಮುಂದುವರೆಸುತ್ತಾರಾ ಎಂಬ ಅನುಮಾನ ರಾಜ್ಯದ ಜನತೆಯನ್ನು ಕಾಡಲು ಆರಂಭವಾಗಿದೆ. ಸದನದಲ್ಲಿ ಚರ್ಚಿಸುವಾಗ ನಾನು ಯಾವುದೇ ತರಹದ ದ್ವೇಷದ ರಾಜಕಾರಣ ಮಾಡುವುದಿಲ್ಲ ಅನ್ನುವುದರ ಬದಲು ದ್ವೇಷದ ರಾಜಕಾರಣ ಬಿಡುವುದಿಲ್ಲ ಎಂದಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದರು.

ಯಾವ ಅಲ್ಪಸಂಖ್ಯಾತರೂ ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಮಾಡಿ ಎಂದು ಮನವಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರೇ ಟಿಪ್ಪು ಓರ್ವ ದೇಶಭಕ್ತ ಅಪ್ರತಿಮ ಹೋರಾಟಗಾರನೆಂದು ಪರಿಗಣಿಸಿ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಿದ್ದರು. ಕೂಡಲೇ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಟಿಪ್ಪು ಜಯಂತಿ ಆಚರಣಾ ವೇದಿಕೆ ಅಧ್ಯಕ್ಷ ಜಾಕೀರ್ ಹುಸೇನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News