ಮಂಡ್ಯ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು, ಕೂಲಿಕಾರರ ಧರಣಿ

Update: 2019-08-03 18:09 GMT

ಮಂಡ್ಯ, ಆ.3: ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು, ಕೃಷಿಕೂಲಿಕಾರರು ಶನಿವಾರ ಧರಣಿ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತಸಂಘ ಹಾಗೂ ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿ ಧರಣಿ ನಡೆಸಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಮತ್ತು ಅದಕ್ಕೆ ಶೇ.50ರಷ್ಟು ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗಧಿಗೆ ಮಾಡಬೇಕೆನ್ನುವ ಡಾ.ಎಂ.ಎಸ್.ಸ್ವಾಮಿನಾಥನ್ ವರದಿನ್ವಯ ಶಾಸನವನ್ನು ರೂಪಿಸಬೇಕು. ರೈತ, ಕೃಷಿ ಕೂಲಿಕಾರರು, ಗ್ರಾಮೀಣ ಕುಶಲಕರ್ಮಿಗಳನ್ನು ಋಣಮುಕ್ತಗೊಳಿಸಲು ಶಾಶ್ವತ ಋಣಮುಕ್ತ ಕಾಯ್ದೆಯನು ಜಾರಿ ಮಾಡುವ ಜತೆಗೆ ದೇಶದಲ್ಲಿನ ಗಂಭೀರವಾದ ಕೃಷಿ ಬಿಕ್ಕಟ್ಟಿನ ಇತ್ಯರ್ಥಕ್ಕೆ ಕನಿಷ್ಠ ಒಂದು ವಾರದ ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ಅವರು ಆಗ್ರಹಿಸಿದರು.

ರೈತರ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ವರ್ಷ ದೇಶಾದ್ಯಂತ ನಡೆದ ಹೋರಾಟಗಳ ಫಲವಾಗಿ ಸ್ವಾಮಿನಾಥನ್ ವರದಿನ್ವಯ ಕೆಲವು ಕೃಷಿ ಉತ್ಪನ್ನಗಳ ಬೆಲೆಯನ್ನು ಅಲ್ಪಸ್ವಲ್ಪ ಹೆಚ್ಚಳ ಮಾಡಲಾಗಿತ್ತು. ಆದರೆ, ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ದೇಶದ ಸ್ವಾತಂತ್ರ್ಯಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತನಾಡುತ್ತಿದೆ. ಆದರೆ, ಕಬ್ಬು, ಭತ್ತ, ತೊಗರಿಗಳಿಗೆ ಘೋಷಣೆ ಮಾಡಿರುವ ಬೆಂಬಲ ಬೆಲೆಯುಉ ಮಾತಿಗೂ ಕೃತಿಗೂ ಯಾವುದೇ ಸಂಬಂಧವಿಲ್ಲವೆಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಕಿಡಿಕಾರಿದರು.

ಕೇವಲ ಮಾತಿನಲ್ಲಲ್ಲದೆ ಕೃತಿಯಲ್ಲೂ ರೈತರ ಬೇಡಿಕೆಗಳು ಈಡೇರಬೇಕೆಂದರೆ ಈ ಕುರಿತು ಸಮಗ್ರವಾಗಿ ಚರ್ಚಿಸಿ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಒಂದು ವಾರಗಳ ಕಾಲ ಕರೆಯಬೇಕು ಎಂದು ಅವರು ಪ್ರತಿಪಾದಿಸಿದರು.

ಮಂಡ್ಯ ಜಿಲ್ಲೆ ಮಳೆಯಿಲ್ಲದೆ ಬರಪೀತವಾಗಿದ್ದು ರೈತರು, ಕೂಲಿಕಾರರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಿಲ್ಲಾಡಳಿತ ಸಮರ್ಪಕವಾಗಿ ಜಾರಿಗೊಳಿಸಬೇಕು. ಕೂಲಿಕಾರರಿಗೆ ಕೊಡಬೇಕಾದ ಸುಮಾರು 10 ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮಳವಳ್ಳಿ, ಮಂಡ್ಯ ತಾಲೂಕುಗಳಲ್ಲಿ ನೀರಾ ಇಳಿಸಿ ಮಾರಾಟ ಮಾಡುತ್ತಿದ್ದ ರೈತರ ಮೇಲೆ ಅಬಕಾರಿ ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಕೂಡಲೇ ಅವರ ಮೇಲಿನ ಪ್ರಕರಣ ಕೈಬಿಡಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಸುರೇಂದ್ರ, ಕರ್ನಾಟಕ ಪ್ರಾಂತ ರೈತಸಂಘ ಜಿಲ್ಲಾ ಮುಖಂಡರಾದ ಟಿ.ಯಶವಂತ, ಟಿ.ಎಲ್.ಕೃಷ್ಣೇಗೌಡ, ಎನ್.ಎಲ್.ಭರತ್‍ರಾಜ್, ಲಿಂಗರಾಜಮೂರ್ತಿ, ನೀರಾ ರೈತ ಮುಖಂಡ ಸಿದ್ದೇಗೌಡ, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News