ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ವಿರೋಧವಿಲ್ಲ: ಎನ್.ಚಲುವರಾಯಸ್ವಾಮಿ

Update: 2019-08-03 18:18 GMT

ಮಂಡ್ಯ, ಆ.3: ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಅಸಮಾಧಾನವಿಲ್ಲ ಎಂದು ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದುವರೆ ವರ್ಷ ಒಳ್ಳೆಯದು, ಕೆಟ್ಟದ್ದು ಅಧಿಕಾರ ಅನುಭವಿಸಿದ್ದೇವೆ. ಉಪಚುನಾವಣೆಯಲ್ಲೂ ಮೈತ್ರಿಗೆ ನಮ್ಮ ವಿರೋಧವಿಲ್ಲ. ಅದು ವರಿಷ್ಠರಿಗೆ ಬಿಟ್ಟ ವಿಚಾರ. ಮೈತ್ರಿ ಮಾಡಿಕೊಂಡರೆ ಮುಂದೆ ಇನ್ನೂ ಎಷ್ಟು ವರ್ಷ ನೋವು ಅನುಭವಿಸಬೇಕೋ ಅನುಭವಿಸೋಣ ಎಂದರು.

ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ. ರಾಜಕೀಯ ಪಕ್ಷಗಳು ಉಪಚುನಾವಣೆಗೆ ಸಿದ್ಧತೆಯಲ್ಲಿವೆ. 17 ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿ ನೇಮಕ ಮಾಡಿದೆ. ನನ್ನನ್ನೂ ಉಸ್ತುವಾರಿ ಮಾಡಲಾಗಿದೆ. ಒಂದು ವಾರದಲ್ಲಿ ಕೆ.ಆರ್.ಪೇಟೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲಿ ನಾನು ಅಭ್ಯರ್ಥಿ ಆಗುವುದಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಮಾತ್ರ ಸ್ಪರ್ಧೆ ಮಾಡುವೆ. ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್‍ಗೆ ಸಿಗಲಿವೆ. ಮೈತ್ರಿಯಾದರೂ ಮತದಾರರ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದರು.

ಜೆಡಿಎಸ್ ನಾಯಕರು ಜಿಲ್ಲೆಗೆ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕಾವೇರಿ ಒಂದೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ನೀರು ಬಿಟ್ಟರು. ಸೋಲಿನ ನಂತರ ಸಿಎಂ ಕೇಂದ್ರಕ್ಕೆ ಹೋಗಿ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು(ಪುಟ್ಟರಾಜು) ಆಯೋಗದ ನಿರ್ಧಾರ ಕೇಳದೇ ನೀರನ್ನು ಬಿಟ್ಟರು ಎಂದು ಅವರು ಜೆಡಿಎಸ್ ಮುಖಂಡರ ವಿರುದ್ಧ ಕಿಡಿಕಾರಿದರು.

ಯಡಿಯೂರಪ್ಪ ಓರ್ವ ಹೋರಾಟಗಾರ. 105 ಸೀಟು ಗೆದ್ದರೂ ಸಿಎಂ ಆಗಲು ಆಗಲಿಲ್ಲ. ನಮ್ಮ ಜಿಲ್ಲೆಯ ಓರ್ವ ಮಗ ಸಿಎಂ ಆಗಿದ್ದಾರೆ. ಮತ್ತೊಮ್ಮೆ ಅವಕಾಶ ಸಿಗೋದು ಕಡಿಮೆ. ಉತ್ತಮ ಆಡಳಿತ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಬ್ಬ ಸಿದ್ಧಾರ್ಥರನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಸಮಸ್ಯೆ ಬಂದಂತಹ ಉದ್ಯಮಿಗಳನ್ನು ಕರೆದು ಸರಕಾರಗಳು ಸಮಸ್ಯೆ ಪರಿಹರಿಸಬೇಕು. ದೇಶದ್ರೋಹಿಗಳಿಗೆ, ತೆರಿಗೆಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದ್ದನ್ನು ನೋಡಿದ್ದೇವೆ. ಉದ್ಯಮಿಗಳಿಗೆ ಸರಕಾರಗಳು ಸಹಾಯ ಹಸ್ತ ಚಾಚಬೇಕು ಎಂದು ಅವರು ಹೇಳಿದರು.

ಮಾಜಿ ಶಾಸಕ ಎಚ್.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News