ಈ ಒಂದು ಕಾರಣಕ್ಕೆ ಕನ್ನಡದ ‘ಕುರುಕ್ಷೇತ್ರ’ ತೆಲುಗಿನ ‘ಬಾಹುಬಲಿ’ ಆಗಲಾರದು

Update: 2019-08-03 18:44 GMT

ಒಂದು ಸಿನೆಮಾದ ನಿರ್ದೇಶಕನಿಗೆ ಸಲ್ಲಬೇಕಾದ ಮನ್ನಣೆಯನ್ನು ಬೇರೊಬ್ಬರು ಆಕ್ರಮಿಸಿಕೊಳ್ಳಬಾರದು ಎಂಬ ವಾದದಲ್ಲಿ ಯಾವ ರಾಜಿಯೂ ಇಲ್ಲ. ಶೀರ್ಷಿಕೆಯಲ್ಲೇ ಮುನಿರತ್ನ ಎಂಬ ಹೆಸರು ಸೇರಿಸಿಕೊಂಡು, ನಿರ್ದೇಶಕನನ್ನು ಬದಿಗೊತ್ತಿ ರಾಜಕೀಯ ಹಿನ್ನೆಲೆಯ ತನ್ನ ಹಣವಂತ ನಿರ್ಮಾಪಕನನ್ನು ಮೆರೆಸಲು ಹಾತೊರೆಯುತ್ತಿರುವ ಕುರುಕ್ಷೇತ್ರ ಸಿನೆಮಾ ಬಿಡುಗಡೆಯಾದ ನಂತರ ಒಂದೊಮ್ಮೆ ಹಣಗಳಿಕೆಯಲ್ಲಿ ‘ಬಾಹುಬಲಿ’ಯ ದಾಖಲೆಗಳನ್ನು ಮುರಿದುಹಾಕಿದರೂ ಸಹ ತನ್ನ ನಿರ್ದೇಶಕನನ್ನು ನಡೆಸಿಕೊಳ್ಳುವ ವಿಚಾರದಲ್ಲಿ ಸೋತುಹೋದ ಕಲೆ ಮಾತ್ರ ಯಾವತ್ತಿಗೂ ಹಾಗೇ ಉಳಿಯಲಿದೆ.

ಕನ್ನಡತನದ ಅಸ್ಮಿತೆಯನ್ನು ಕನ್ನಡ ಸಿನೆಮಾಗಳ ಮತ್ತು ಸಿನಿನಟರ ಮೂಲಕವಷ್ಟೇ ಅಳೆಯುವ ಅಭ್ಯಾಸ ಇರುವವರಿಗೆ ಈ ಮಾತು ಕೊಂಚ ಬೇಸರ ತರಿಸಬಹುದು. ಬಾಹುಬಲಿಯಂತಹ ಅನ್ಯಭಾಷೆಯ ದುಬಾರಿ ಮೇಕಿಂಗ್ ಅನ್ನು ಸರಿಗಟ್ಟುವಂತಹ ಸಿನೆಮಾವೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ, ಹಾಗಾಗಿ ಕನ್ನಡಕ್ಕೂ ಒಂದು ಹೆಮ್ಮೆಯ ಗರಿ ಸೇರಿಕೊಳ್ಳಲಿದೆ ಎಂಬ ತರ್ಕದಲ್ಲಿ ಇರುವವರಿಗೆ ಸಿನೆಮಾ ರಿಲೀಸ್ ಆಗುವುದಕ್ಕೆ ಮೊದಲೇ ಇಂತಹದ್ದೊಂದು ತೀರ್ಪು ಕೇಳಿ ಬೇಸರವಾಗುವುದು ಸಹಜ. ಆದರೆ ಈ ತುಲನೆ ಒಂದು ವಾಸ್ತವಿಕ ಒಳನೋಟದೊಂದಿಗೆ ಹೊಮ್ಮಿರುವಂತಹದ್ದು, ಆ ಒಳನೋಟಕ್ಕೆ ನಿರ್ದಿಷ್ಟ ಕಾರಣವೂ ಇವೆ.

ಎರಡು ಸಿನೆಮಾಗಳ ನಡುವಿನ ಶ್ರೇಷ್ಠತೆಯನ್ನು ತೂಗಲು ಒಬ್ಬ ಸಿನಿತಜ್ಞನಿಗೆ ಬೇಕಾದ ನಿಪುಣತೆ ಅಥವಾ ಸಿನೆಮಾ ನಿರ್ಮಾಣದ ಬಜೆಟ್ ಗಾತ್ರ, ಅವುಗಳಿಗಿರುವ ಮಾರುಕಟ್ಟೆಯ ಹರವುಗಳ ಅಂದಾಜು ನಮಗಿಲ್ಲ ಎಂದು ಒಪ್ಪಿಕೊಳ್ಳೋಣ. ಒಪ್ಪಿಕೊಳ್ಳುತ್ತಲೇ, ಒಬ್ಬ ಸಹಜ ಸಾಮಾನ್ಯ ನೋಡುಗನಾಗಿ ಈ ಎರಡು ಸಿನೆಮಾಗಳ ವಿದ್ಯಮಾನಗಳನ್ನು ಗಮನಿಸಿದಾಗ ಕನ್ನಡದ ‘ಮುನಿರತ್ನ ಕುರುಕ್ಷೇತ್ರ’ದಲ್ಲಿ ಒಂದು ಊನತೆ ಎದ್ದು ಕಾಣುತ್ತೆ.

ಎರಡೂವರೆಯಿಂದ ಮೂರು ಗಂಟೆಯೊಳಗೆ ಪರದೆ ಮೇಲೆ ಸರಿದುಹೋಗುವ ಸಿನೆಮಾವೊಂದರ ನಿರ್ಮಾಣದ ಹಿಂದೆ ಸಾಕಷ್ಟು ಜನರ ಬೆವರು ಹರಿದಿರುತ್ತದೆ. ಕಾಸು ಸುರಿಯುವ ನಿರ್ಮಾಪಕನಿಂದ ಮೊದಲ್ಗೊಂಡು ಬೆಳಕು ಚೆಲ್ಲುವ ಲೈಟ್‌ಬಾಯ್‌ವರೆಗೆ ಒಂದು ತಂಡದ ಶ್ರಮದ ಮೊತ್ತವಾಗಿ ಹೊರಹೊಮ್ಮುವ ಸಿನೆಮಾ ಪ್ರೊಡಕ್ಷನ್ ಹಂತದ ತನ್ನ ಯಾವ ದುಗುಡ ದುಮ್ಮಾನಗಳನ್ನು ತೋರಿಸಿಕೊಳ್ಳದೆ ರಂಜನೆಯನ್ನಷ್ಟೇ ನಮಗೆ ದಾಟಿಸಿ ಖುಷಿಗೊಳ್ಳುತ್ತದೆ. ಆದರೂ ಇಡೀ ತಂಡದ ಶ್ರಮ ಎಷ್ಟೆಂಬುದನ್ನು ನಾವು ಊಹಿಸಬಹುದು. ಅದರಲ್ಲಿ ಪ್ರತಿಯೊಬ್ಬರ ಶ್ರಮವೂ ಮುಖ್ಯವಾದುದು.

ಕೆಲವೊಮ್ಮೆ ಯಾವ ಹೀರೊ, ಯಾರು ನಿರ್ಮಾಪಕ, ಯಾವ ಬ್ಯಾನರ್ ಏನೊಂದೂ ಗೊತ್ತಿರದೆ ದಿನದಂತ್ಯಕ್ಕೆ ಕೂಲಿ ಕೊಡುವ ಪ್ರೊಡಕ್ಷನ್ ಮ್ಯಾನೇಜರ್‌ನನ್ನಷ್ಟೇ ನಂಬಿ ತಮ್ಮ ಯೂನಿಟ್ ಜೊತೆಗೆ ಬಂದು ಕೆಲಸ ಮಾಡಿ ಹೋಗುವ ಲೈಟ್‌ಬಾಯ್‌ಗಳದ್ದೂ ಅಂತಹ ಸಿನೆಮಾದ ಯಶಸ್ಸಿನಲ್ಲಿ ಒಂದು ಪಾಲು ಇರುತ್ತೆ. ‘‘ಕಾಸು ಪಡೆದು ಕೆಲಸ ಮಾಡಿ ಹೋದರು’’ ಎಂದು ಅವರನ್ನು ಹೊರಗಿಡಲಿಕ್ಕಾಗುವುದಿಲ್ಲ. ಯಾಕೆಂದರೆ ಸಿನೆಮಾದ ನಾಯಕ ನಟನಿಂದ ನಿರ್ದೇಶಕನವರೆಗೆ ಎಲ್ಲರೂ ಕಾಸು ಪಡೆದೇ ಕೆಲಸ ಮಾಡಿದವರು. ಅಷ್ಟೇ ಯಾಕೆ ದುಡ್ಡು ಸುರಿಯುವ ನಿರ್ಮಾಪಕ ಕೂಡ ಹಾಕಿದ ಬಂಡವಾಳಕ್ಕೆ ಲಾಭ ನಿರೀಕ್ಷೆಯ ಲೆಕ್ಕ ಹಾಕಿಕೊಂಡೇ ಹಣ ಖರ್ಚು ಮಾಡಿರುತ್ತಾನೆ. ಆದರೂ ಸಿನೆಮಾ ನಿರ್ಮಾಣವನ್ನು ಅವರ (Passion) ಆಗಿ ಕಾಣುತ್ತೇವೆ, ವಿಶೇಷ ಬಾಂಧವ್ಯವನ್ನು ಬೆಸೆದು ನೋಡುತ್ತೇವೆ. ಅಷ್ಟೇ ಪ್ರಮಾಣದಲ್ಲಲ್ಲದಿದ್ದರೂ ಅಂತಹದ್ದೊಂದು ಬಾಂಧವ್ಯ ಲೈಟ್‌ಬಾಯ್‌ಗೂ ಇರುತ್ತೆ. ಅದನ್ನು ನಾವ್ಯಾರು ತಳ್ಳಿಹಾಕಲಿಕ್ಕಾಗುವುದಿಲ್ಲ.

ಇಲ್ಲಿ ಚರ್ಚಿಸಬೇಕೆಂದುಕೊಂಡಿರುವುದು ಲೈಟ್‌ಬಾಯ್‌ಗಳ ಸಂಗತಿಯನ್ನಲ್ಲ. ಅದು ನಿಜಕ್ಕೂ ಶೋಚನೀಯವಾಗಿರುತ್ತೆ. ಪ್ರತ್ಯೇಕವಾಗಿಯೇ ಅದನ್ನು ಶೋಧಿಸಿ ಬಯಲಾಗಿಸಬೇಕಿದೆ. ಆದರೆ ಸಿನೆಮಾಗಾಗಿ ಕೆಲಸ ಮಾಡಿದ ಯಾವ ವ್ಯಕ್ತಿಯ ಶ್ರಮವನ್ನೂ ಅಲ್ಲಗಳೆಯುವ, ಸೈಡ್‌ಲೈನ್ ಮಾಡುವ ಅಥವಾ ಪ್ರಭಾವಿ ಹಿನ್ನೆಲೆಯವರು ಓವರ್‌ಟೇಕ್ ಮಾಡುವ ಕೆಲಸವಾಗಬಾರದು. ಹಾಗೆ ಮಾಡುವುದು ಒಂದರ್ಥದಲ್ಲಿ ಆ ಕಾಯಕಕ್ಕೆ ಮಾಡುವ ಅವಮಾನವಾಗಿರುತ್ತೆ. ಇದನ್ನು ಅರ್ಥ ಮಾಡಿಕೊಂಡು ಮುಂದುವರಿಯೋಣ.

ಏಕಕಾಲಕ್ಕೆ ನಾನಾ ಭಾಷೆಗಳಲ್ಲಿ ತಯಾರಾಗಿ, ತೆರೆಗಪ್ಪಳಿಸಿ, ತನ್ನ ಗ್ರಾಫಿಕ್ ವೈಭವದಿಂದ ಭಾರತೀಯ ಸಿನೆಮಾ ರಂಗದಲ್ಲಿ ಬೆರಗು ಮೂಡಿಸಿದ ‘ಬಾಹುಬಲಿ’ ಸಿನೆಮಾದ ಆರಂಭಿಕ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ಆ್ಯಂಗ್ರಿಯಂಗ್ ಮ್ಯಾನ್ ಇಮೇಜಿನ ಹೊಡಿ-ಬಡಿ, ರೊಮ್ಯಾನ್ಸ್, ರೆಬೆಲ್ಲುತನಗಳ ಪಾತ್ರಗಳ ಮೂಲಕ ತೆಲುಗು ಸಿನಿರಸಿಕರಿಗಷ್ಟೇ ಸೀಮಿತವಾಗಿದ್ದ ಪ್ರಭಾಸ್‌ಗೆ ‘ಬಾಹುಬಲಿ’ ಸಿನೆಮಾದಿಂದ ಖ್ಯಾತಿ ಸಿಕ್ಕಿದ್ದು ಸುಳ್ಳಲ್ಲ. ಆದರೆ ಆ ಹೀರೋಗಿಂತಲೂ ದೊಡ್ಡ ಸ್ಟಾರ್‌ಡಂ ಅನ್ನು ಆ ಸಿನೆಮಾ ತಂದುಕೊಟ್ಟದ್ದು ನಿರ್ದೇಶಕ ರಾಜಮೌಳಿಗೆ. ಯಕಶ್ಚಿತ್ ನೊಣವೊಂದರ ಸೇಡಿನ ಕಲ್ಪನೆಯನ್ನಾಧರಿಸಿ ತನ್ನಪ್ಪನೇ ಬರೆದಿದ್ದ ಕಥೆಯಿಟ್ಟುಕೊಂಡು ‘ಈಗ’ ಎಂಬ ಅದ್ಭುತ ಸಿನೆಮಾ ಮಾಡಿದಾಗಲೇ ರಾಜಮೌಳಿ ಎಂಥಾ ಕುಸುರಿ ನಿರ್ದೇಶಕ ಎಂಬುದು ಸಾಬೀತಾಗಿತ್ತು. ಬಾಹುಬಲಿ ಸಿನೆಮಾ ಆ ನಿರ್ದೇಶಕನಿಗೆ ಸಲ್ಲಬೇಕಿದ್ದ ಅಷ್ಟೂ ಮನ್ನಣೆಯನ್ನು ಚಾಚೂ ತಪ್ಪದೆ ಸಲ್ಲಿಸಿತು. ಹೌದು, ಒಂದು ಸಿನೆಮಾ ನಿರ್ಮಾಣದ ಹಿಂದೆ ಎಲ್ಲರ ಶ್ರಮವಿದೆ ಎನ್ನುವುದು ಎಷ್ಟು ಸತ್ಯವೋ, ಆ ಎಲ್ಲಾ ಶ್ರಮಗಳನ್ನು ಹದವಾಗಿ ಬೆರೆಸಿ ಸಿನೆಮಾ ಎಂಬ ಕಲಾಕೃತಿಯನ್ನಾಗಿ ಪರಿವರ್ತಿಸುವ ದೊಡ್ಡ ಹೊಣೆ ನಿರ್ದೇಶಕನದ್ದು. ಹಾಗಾಗಿ ಅವನನ್ನು ‘ಸಿನೆಮಾದ ಕ್ಯಾಪ್ಟನ್’ ಎಂದು ಕರೆಯುವ ವಾಡಿಕೆ ರೂಢಿಯಲ್ಲಿದೆ. ನಿರ್ದೇಶಕನೊಬ್ಬ ಸರಿಯಿರದೇ ಹೋದರೆ ಹಲವರ ಪ್ರಾಮಾಣಿಕ ಶ್ರಮಗಳಿಗೆ ಬೆಲೆಯೇ ಇಲ್ಲದಂತಾಗಿ ಸಮಸ್ತ ಸಿನೆಮಾವೇ ಡಬ್ಬ ಸೇರಿಬಿಡುತ್ತೆ. ಇಲ್ಲಿ ನಿರ್ದೇಶಕನನ್ನು ಮಿಕ್ಕುಳಿದವರಿಗಿಂತ ಎತ್ತರದ ಸ್ಥಾನಕ್ಕೆ ಏರಿಸುವುದು ಬರಹದ ಇರಾದೆಯಲ್ಲ. ಆದರೆ ಸಿನೆಮಾ ತಯಾರಾಗುವುದರ ಹಿಂದೆ ಆ ಸ್ಥಾನದ ಹೊಣೆ ಮತ್ತು ಆ ಸ್ಥಾನಕ್ಕೆ ಸಿಗಬೇಕಾದ ಮನ್ನಣೆಯನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದೇನೆ. ಆ ನಿಟ್ಟಿನಲ್ಲಿ ‘ಬಾಹುಬಲಿ’ ಸಿನೆಮಾ ತನ್ನನ್ನು ರೂಪಿಸಿದ, ಜನ ತನ್ನತ್ತ ತಿರುಗಿನೋಡುವಂತೆ ದೃಶ್ಯೀಕರಿಸಿದ ನಿರ್ದೇಶಕನಿಗೆ ಸಲ್ಲಬೇಕಾದ ಕ್ರೆಡಿಟ್ಟಿನ ಪಾಲನ್ನು ಸಲ್ಲಿಸಿ ಗೆದ್ದಿದೆ. ಇವತ್ತಿಗೂ ಹೆಚ್ಚಿನ ಜನರಿಗೆ ‘ಬಾಹುಬಲಿ’ ಸಿನೆಮಾ ಸರಣಿಗಳ ನಿರ್ಮಾಪಕರು ಯಾರೆಂಬುದು ಸರಿಯಾಗಿ ಗೊತ್ತಿಲ್ಲ. ಆದರೆ ನಿರ್ದೇಶಕ ಎಸ್.ಆರ್.ರಾಜಮೌಳಿಯೆಂಬುದು ಚೆನ್ನಾಗಿ ಗೊತ್ತಿದೆ.

ಆದರೆ ಕನ್ನಡದ ‘ಕುರುಕ್ಷೇತ್ರ’ ಈ ಹೊಣೆ ನಿಭಾಯಿಸುವಲ್ಲಿ ರಿಲೀಸ್‌ಗೂ ಮೊದಲೇ ಸೋತಂತಿದೆ. ಎಷ್ಟೋ ಜನರಿಗೆ ‘ಮುನಿರತ್ನಂ ಕುರುಕ್ಷೇತ್ರ’ ಎಂಬ ಬಹು ಚರ್ಚಿತ ಸಿನೆಮಾವನ್ನು ದೃಶ್ಯವಾಗಿ ಕನಸಿ, ಜೀವ ತುಂಬಿದ್ದು ನಾಗಣ್ಣ ಎಂಬ ನಿರ್ದೇಶಕ ಎಂಬುದೇ ಗೊತ್ತಿಲ್ಲ, ಆದರೆ ಅದು ಮುನಿರತ್ನಂ ಸಿನೆಮಾ ಎಂದು ಸಲೀಸಾಗಿ ಹೇಳಿಬಿಡುತ್ತಾರೆ. ಕನ್ನಡದ ಸಿನೆಮಾಗಳಿಗಿರುವ ಸೀಮಿತ ಮಾರುಕಟ್ಟೆಯ ಸವಾಲು ಮನದಟ್ಟಾಗಿದ್ದಾಗ್ಯೂ ಸಹಾ ಮುನಿರತ್ನ ಇಂತಹ ದೊಡ್ಡ ಬಜೆಟ್‌ಗೆ ಮುಂದಾಗಿರುವುದು ನಿಜಕ್ಕೂ ಮೆಚ್ಚಬೇಕಾದ್ದು, ಒಂದರ್ಥದಲ್ಲಿ ಸಾಹಸವೇ ಸರಿ. ಹಾಗಂತ ಒಂದು ಸಿನೆಮಾ ರೂಪುಗೊಳ್ಳಲು (Key) ಪಾತ್ರ ವಹಿಸುವ ನಿರ್ದೇಶಕನಿಗೆ ಸಿಗಬೇಕಾದ ಕ್ರೆಡಿಟನ್ನು ನಿರ್ಮಾಪಕ ಆಕ್ರಮಿಸಿಕೊಳ್ಳುವುದು ಎಷ್ಟು ಸರಿ?

ಇವತ್ತಿಗೂ ನಾವು ‘ನಾಗರಹಾವು’ ಎಂದಾಕ್ಷಣ ಪುಟ್ಟಣ್ಣ ಕಣಗಾಲ್ ಸಿನೆಮಾ, ‘ಪಥೇರ್ ಪಾಂಚಾಲಿ’ ಎಂದಾಕ್ಷಣ ಸತ್ಯಜಿತ್ ರೇ ಸಿನೆಮಾ, ‘ರೋಜಾ’ ಎಂದಾಕ್ಷಣ ಮಣಿರತ್ನಂ ಸಿನೆಮಾಗಳು ಎನ್ನುತ್ತೇವೆಯೇ ಹೊರತು ಆ ಚಿತ್ರಗಳ ನಿರ್ಮಾಪಕರು ಯಾರೆಂಬುದೇ ಗೊತ್ತಿಲ್ಲ. ವಿಚಿತ್ರವೆಂದರೆ ‘ರೋಜಾ’ ಸಿನೆಮಾಗೆ ಕಾಸು ಹಾಕಿ, ನಿರ್ಮಾಪಕ ಎನಿಸಿಕೊಂಡದ್ದು ಕೆ.ಬಾಲಚಂದರ್ ಎಂಬ ಮತ್ತೊಬ್ಬ ಅದ್ಭುತ ನಿರ್ದೇಶಕ. ರಜನಿಕಾಂತ್, ಕಮಲ್‌ಹಾಸನ್, ಜಯಪ್ರದ, ಸರಿತಾ ಮೊದಲಾದ ನಟನಟಿಯರುಗಳಿಗೆ ಸಿನಿಭವಿಷ್ಯ ಕಟ್ಟಿಕೊಟ್ಟಂತಹ ಅತ್ಯದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದವರು ಅವರು. ತಮಿಳಿನ ‘ಅಪೂರ್ವ ರಾಗಂಗಳ್’ ಮತ್ತು ಕನ್ನಡದ ‘ಬೆಂಕಿಯಲ್ಲಿ ಅರಳಿದ ಹೂ’ ಸಿನೆಮಾಗಳು ನಿರ್ದೇಶಕನಾಗಿ ಅವರ ಪ್ರತಿಭೆಗೆ ಒಂದೆರಡು ಸಾಕ್ಷಿಗಳಷ್ಟೆ. (Path Breaking) ಸಿನೆಮಾಗಳನ್ನು ಕೊಟ್ಟ ಖ್ಯಾತಿ ಬೆನ್ನಿಗಿದ್ದರೂ ‘ರೋಜಾ’ ಕೆ.ಬಾಲಚಂದರ್ ಸಿನೆಮಾ ಅನ್ನಿಸಿಕೊಳ್ಳಲಿಲ್ಲ. ಮಣಿರತ್ನಂ ಸಿನೆಮಾವಾಗಿಯೇ ಗುರುತಿಸಿಕೊಳ್ಳುತ್ತಿದೆ. ಇದು ಭಾರತೀಯ ಚಿತ್ರ ಪರಂಪರೆಯಲ್ಲಿ ಸಿನೆಮಾ ಮತ್ತು ನಿರ್ದೇಶಕ ನಡುವಿರುವ ನಂಟಿಗೆ ಸಾಕ್ಷಿ.

ಇಂತಹ ನಿರ್ದೇಶಕನ ಕ್ಯಾಪ್ಟನ್ಸಿಗೆ ಸಿಗಬೇಕಾದ ಮನ್ನಣೆಯನ್ನು ದೊರಕಿಸಿಕೊಡುವಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಹಿಂದೆ ಬಿದ್ದಿದೆ. ಬಾಹುಬಲಿ ಸಿನೆಮಾವು ನಿರ್ದೇಶಕ ರಾಜಮೌಳಿಗೆ ಧಾರೆ ಎರೆದಿದ್ದ ಕ್ರೆಡಿಟ್ಟನ್ನೆಲ್ಲ ‘ಕುರುಕ್ಷೇತ್ರ’ ಕಾಸು ಸುರಿದ ನಿರ್ಮಾಪಕ ಮುನಿರತ್ನಂ ಅರ್ಪಿಸಲು ಹಾತೊರೆದು ಸೊರಗಿದಂತೆ ಕಾಣುತ್ತಿದೆ. ಮೊನ್ನೆ ಟಿ.ವಿ.ಯಲ್ಲಿ ಆ ಸಿನೆಮಾದ ಆಡಿಯೋ ಬಿಡುಗಡೆ ಸಮಾರಂಭ ಬಿತ್ತರವಾಯ್ತು. ಆಗಲೂ ವೇದಿಕೆ ಸಂಪೂರ್ಣವಾಗಿ ಅರ್ಪಣೆಯಾದದ್ದು ದೊಡ್ಡ ಬಜೆಟ್‌ನ ಸಾಹಸಕ್ಕೆ ಕೈಹಾಕಿದ ಮುನಿರತ್ನಂ ಗುಣಗಾನಕ್ಕೇ ವಿನಃ, ಆ ಹಣದ ಜೊತೆಗೆ ಹಲವರ ಶ್ರಮವನ್ನೂ ವ್ಯವಸ್ಥಿತವಾಗಿ ಬಳಸಿ ಚಿತ್ರವಾಗಿಸಿದ ನಿರ್ದೇಶಕನ ಶ್ರಮಕ್ಕಲ್ಲ. ತನ್ನ ಸಿನೆಮಾಗೆ ದುಡಿದ ‘ತಂತ್ರಜ್ಞ’ರನ್ನು ಪರಿಚಯಿಸುವ ಸಂದರ್ಭ ಬಂದಾಗಲೂ ಮುನಿರತ್ನ ನಿರ್ದೇಶಕರನ್ನು ವೇದಿಕೆಗೆ ಆಹ್ವಾನಿಸಿದ್ದು ಗ್ರಾಫಿಕ್ ಡಿಸೈನರ್, ವಸ್ತ್ರವಿನ್ಯಾಸಗಾರ, ಹೀಗೆ ಎಲ್ಲರ ಪಟ್ಟಿ ಮುಗಿದ ಬಳಿಕ ಕಟ್ಟಕಡೆಯ ವ್ಯಕ್ತಿಯಾಗಿ. ಹಾಗೆ ಕರೆಯುವಾಗ (Last but not the LEAST) ಎಂಬ ಹೆಮ್ಮೆಯೂ ಅವರಲ್ಲಿರಲಿಲ್ಲ. ‘‘ಈ ಸಿನೆಮಾದ ನಿರ್ಮಾಣದ ಶ್ರೇಯಸ್ಸು ಇವರಿಗೆ ಸಲ್ಲಬೇಕು’’ ಎಂದು ಸಾಲಾಗಿ ನಿಂತಿದ್ದ ತಂತ್ರಜ್ಞರಲ್ಲಿ ನಿರ್ದೇಶಕನನ್ನೂ ಒಬ್ಬರನ್ನಾಗಿಸಿ ಮುನಿರತ್ನಂ ಹೇಳಿದ್ದೇನೊ ಹೌದು. ಆದರೆ ಇಡೀ ಸಿನೆಮಾದ ಪ್ರಚಾರ ವೈಖರಿ ಅದಕ್ಕೆ ಅಪವಾದದಂತಿರುವುದು ಎದ್ದು ಕಾಣುತ್ತಿದೆ.

ಹಾಗಂತ, ಈ ಲೇಖನದ ಬರಹಗಾರನಾಗಿ ನಿರ್ದೇಶಕ ನಾಗಣ್ಣನ ಮೇಲೆ ನನಗೆ ಅಭಿಮಾನವಿದೆಯೆಂತಲೂ ಅಲ್ಲ. ಅವರ ನಿರ್ದೇಶನದ ಸಿನೆಮಾಗಳ ಸಾಕಷ್ಟು ಲೋಪಗಳ ಕುರಿತು ತಕರಾರೂ ಇವೆ. ಉದಾಹರಣೆಗೆ ಕೆಲ ವರ್ಷಗಳ ಹಿಂದಷ್ಟೇ ಇದೇ ದರ್ಶನ್ ನಟಿಸಿದ್ದ, ಹಣಗಳಿಕೆಯ ವಿಚಾರದಲ್ಲಿ ಬ್ಲಾಕ್‌ಬ್ಲಸ್ಟರ್ ಎಂತಲೂ ಕರೆಸಿಕೊಂಡಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನೆಮಾವನ್ನೇ ತೆಗೆದುಕೊಳ್ಳೋಣ. ಅದಕ್ಕೂ ನಾಗಣ್ಣನವರೇ ನಿರ್ದೇಶಕ. ಕನ್ನಡ ಸಿನಿಮೋದ್ಯಮವೇ ಅತ್ಯದ್ಭುತ ಎಂದು ಮೆಚ್ಚಿಕೊಂಡ ಆ ಐತಿಹಾಸಿಕ ಸಿನೆಮಾದಲ್ಲೇ ನಿರ್ದೇಶಕನಾಗಿ ಹಲವು ಲೋಪವೆಸಗಿದ್ದರು. ಇಡೀ ಸಿನೆಮಾದ ಚಾರಿತ್ರಿಕ ಜೀವಾಳವೇ ಉತ್ತರ ಕರ್ನಾಟಕದ ಬೆಳಗಾವಿ ಸೀಮೆಯ ಸೊಗಡು. ದುರಂತವೆಂದರೆ, ರಾಯಣ್ಣನ ಪಾತ್ರಧಾರಿ ಬಿಟ್ಟರೆ ಮತ್ತ್ಯಾರೂ ಆ ಸೊಗಡಿನ ಭಾಷಾ ಧಾಟಿಯಲ್ಲಿ ಮಾತಾಡುವ ಯತ್ನವನ್ನೇ ಮಾಡಲಿಲ್ಲ, ಕಿತ್ತೂರು ಚೆನ್ನಮ್ಮನ ಪಾತ್ರವೂ ಸೇರಿದಂತೆ! ಹಾಗೆ ನೋಡಿದರೆ ರಾಯಣ್ಣ ಆಡಿದ ಭಾಷೆಯೂ ಬೆಳಗಾವಿತನಕ್ಕಿಂತ ಹೆಚ್ಚಾಗಿ ಹುಬ್ಬಳ್ಳಿ-ಧಾರವಾಡ ಬಯಲುಸೀಮೆಯನ್ನು ಅಣಕಿಸುತ್ತಿದ್ದವು! ಇನ್ನು ದೇವಿ ಪ್ರತ್ಯಕ್ಷಳಾಗಿ ರಾಯಣ್ಣನಿಗೆ ‘ವೀರಖಡ್ಗ’ ಕೊಡುವ ಕಟ್ಟುಕಥೆಯನ್ನು ತಮ್ಮ ಐತಿಹಾಸಿಕ ಸಿನೆಮಾದೊಳಕ್ಕೆ ತೂರಿಸುವ ಮೂಲಕ ನಿರ್ದೇಶಕರು ಸಂಗೊಳ್ಳಿ ರಾಯಣ್ಣನ ಶೌರ್ಯ, ಪರಾಕ್ರಮಗಳಿಗಷ್ಟೇ ಅಲ್ಲ ಚರಿತ್ರೆಗೂ ದ್ರೋಹ ಬಗೆದಿದ್ದರು.

ಇಷ್ಟಾದಾಗ್ಯೂ, ಒಂದು ಸಿನೆಮಾದ ನಿರ್ದೇಶಕನಿಗೆ ಸಲ್ಲಬೇಕಾದ ಮನ್ನಣೆಯನ್ನು ಬೇರೊಬ್ಬರು ಆಕ್ರಮಿಸಿಕೊಳ್ಳಬಾರದು ಎಂಬ ವಾದದಲ್ಲಿ ಯಾವ ರಾಜಿಯೂ ಇಲ್ಲ. ಶೀರ್ಷಿಕೆಯಲ್ಲೇ ಮುನಿರತ್ನ ಎಂಬ ಹೆಸರು ಸೇರಿಸಿಕೊಂಡು, ನಿರ್ದೇಶಕನನ್ನು ಬದಿಗೊತ್ತಿ ರಾಜಕೀಯ ಹಿನ್ನೆಲೆಯ ತನ್ನ ಹಣವಂತ ನಿರ್ಮಾಪಕನನ್ನು ಮೆರೆಸಲು ಹಾತೊರೆಯುತ್ತಿರುವ ಕುರುಕ್ಷೇತ್ರ ಸಿನೆಮಾ ಬಿಡುಗಡೆಯಾದ ನಂತರ ಒಂದೊಮ್ಮೆ ಹಣಗಳಿಕೆಯಲ್ಲಿ ‘ಬಾಹುಬಲಿ’ಯ ದಾಖಲೆಗಳನ್ನು ಮುರಿದುಹಾಕಿದರೂ ಸಹ ತನ್ನ ನಿರ್ದೇಶಕನನ್ನು ನಡೆಸಿಕೊಳ್ಳುವ ವಿಚಾರದಲ್ಲಿ ಸೋತುಹೋದ ಕಲೆ ಮಾತ್ರ ಯಾವತ್ತಿಗೂ ಹಾಗೇ ಉಳಿಯಲಿದೆ.

Writer - ಗಿರೀಶ್ ತಾಳಿಕಟ್ಟೆ

contributor

Editor - ಗಿರೀಶ್ ತಾಳಿಕಟ್ಟೆ

contributor

Similar News