ವಾಲ್‌ಮಾರ್ಟ್ ಮಳಿಗೆಯಲ್ಲಿ ಶೂಟೌಟ್: 20 ಮಂದಿ ಬಲಿ

Update: 2019-08-04 16:06 GMT

ಎಲ್‌ಪಾಸ್ಸೊ (ಟೆಕ್ಸಾಸ್): ಅಮೆರಿಕದಲ್ಲಿ ಕಳೆದ 24 ತಾಸುಗಳೊಳಗೆ ಎರಡು ನಗರಗಳಲ್ಲಿ ನಡೆದ ಶೂಟೌಟ್‌ನಲ್ಲಿ ಕನಿಷ್ಠ 29 ಮಂದಿ ಬಲಿಯಾಗಿದ್ದಾರೆ. ಮೆಕ್ಸಿಕೊ ಗಡಿಗೆ ತಾಗಿಕೊಂಡಿರುವ ಟೆಕ್ಸಾಸ್ ರಾಜ್ಯದ ಎಲ್‌ಪಾಸ್ಸೊ ನಗರದಲ್ಲಿ ಶನಿವಾರ ಬಂಧೂಕುದಾರಿಯೊಬ್ಬ ವಾಲ್‌ಮಾರ್ಟ್ ಮಳಿಗೆಯಲ್ಲಿ ಶನಿವಾರ ಸಂಜೆ ಮನಬಂದಂತೆ ಗುಂಡು ಹಾರಿಸಿ ಕನಿಷ್ಠ 20 ಮಂದಿಯನ್ನು ಹತ್ಯೆಗೈದಿದ್ದಾನೆ. ಘಟನೆ ಯಲ್ಲಿ ಇತರ 26 ಮಂದಿ ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಇದೊಂದು ಜನಾಂಗೀಯ ದ್ವೇಷದ ಕೃತ್ಯವಾಗಿರುವ ಸಾಧ್ಯತೆಯ ಬಗ್ಗೆ ಟೆಕ್ಸಾಸ್‌ನ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 ಗುಂಡಿನ ದಾಳಿ ನಡೆಸಿದ ಹಂತಕನನ್ನು 21 ವರ್ಷದ ಬಿಳಿಯ ಜನಾಂಗೀಯನಾದ ಆ್ಯಲೆನ್ ಎಂದು ಗುರುತಿಸಲಾಗಿದೆ. ಈತ ಡಲ್ಲಾಸ್‌ನ ಉಪನಗರದ ನಿವಾಸಿಯೆಂದು ತಿಳಿದುಬಂದಿದೆ. ಆ್ಯಲೆನ್ ಹತ್ಯಾಕಾಂಡ ನಡೆಸಿದ ಬಳಿಕ ವಾಲ್‌ಮಾರ್ಟ್ ಮಳಿಗೆಯ ಹೊರಭಾಗದಲ್ಲಿ ಪೊಲೀಸರ ಮುಂದೆ ಶರಣಾಗತನಾಗಿದ್ದಾನೆ.

 ಎಲ್‌ಪಾಸ್ಸೊ ನಗರವು ಮೆಕ್ಸಿಕೊ ದೇಶದ ಜೊತೆಗೆ ಗಡಿಯನ್ನು ಹಂಚಿಕೊಂಡಿದ್ದು, ಹಿಸ್ಪಾನಿಕ್ ಜನಾಂಗೀಯರು ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.

 ಗುಂಡಿನ ದಾಳಿಯಲ್ಲಿ ಮೃತಪಟ್ಟ ಹಲವರು ಶವಗಳು ಮಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ ಚದುರಿಬಿದ್ದಿರುವ ವಿಡಿಯೋ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಗುಂಡು ಹಾರಾಟ ನಡೆಯುತ್ತಿದ್ದಂತೆಯೇ ಭಯಭೀತರಾದ ಶೂಟೌಟಣ್‌ನಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡುವಂತೆ ಎಲ್ ಪಾಸ್ಸೊ ನಗರಾಡಳಿತ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.

 ಶೂಟೌಟ್‌ನ ನಡೆಯುತ್ತಿದ್ದಂತೆಯೇ ನೂರಾರು ಮಂದಿ ಪ್ರಾಣಭಯದಿಂದ ಮಳಿಗೆ ಯಿಂದ ಹೊರಗೋಡಿ ಬರುತ್ತಿರುವ ವಿಡಿಯೋದೃಶ್ಯಗಳು ಪ್ರಸಾರವಾಗಿವೆ. ಶೂಟೌಟ್ ನಡೆದಾಗ 1 ಸಾವಿರದಿಂದ 3 ಸಾವಿರದಷ್ಟು ಗ್ರಾಹಕರು ಮಳಿಗೆಯೊಳಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡವಲ್ಲಿ 2 ವರ್ಷದ ಮಕ್ಕಳಿಂದ ಹಿಡಿದು 82 ವರ್ಷದವರೆಗಿನ ವೃದ್ಧರು ಗಾಯಗೊಂಡಿದ್ದು ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆಯೆಂದು ಮೂಲಗಳು ತಿಳಿಸಿವೆ.

ಟ್ರಂಪ್ ಖಂಡನೆ

ಎಲ್‌ಪಾಸ್ಸೊ ವಾಲ್‌ಮಾರ್ಟ್ ಶೂಟೌಟ್ ಘಟನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ದುರಂತ ಘಟನೆ ಮಾತ್ರವಲ್ಲ, ಹೇಡಿತನದ ಕೃತ್ಯವೆಂದು ಅವರು ಕಿಡಿಕಾರಿದ್ದಾರೆ. ಈ ದ್ವೇಷಪೂರಿತ ಕೃತ್ಯವನ್ನು ಖಂಡಿಸಲು ನಾನು ದೇಶದ ಪ್ರತಿಯೊಬ್ಬ ನಾಗರಿಕನ ಜೊತೆಗೂಡುತ್ತೇನೆ. ಯಾವುದೇ ಕಾರಣಕ್ಕಾಗಿ ಅಮಾಯಕರ ಹತ್ಯೆಯನ್ನು ಸಮರ್ಥಿಸಲಾಗದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News