ಬಿಜೆಪಿ ಈಗಲೂ ಕೋಮುವಾದಿ ಪಕ್ಷ ಆದರೆ ಕಾಲಘಟ್ಟಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ: ಎಚ್.ವಿಶ್ವನಾಥ್

Update: 2019-08-04 13:21 GMT

ಮೈಸೂರು: ಬಿಜೆಪಿ ಈಗಲೂ ಕೋಮುವಾದಿ ಪಕ್ಷನೇ, ಆದರೆ ಕಾಲಘಟ್ಟಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ ಎಂದು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಕಳೆದ ಒಂದು ತಿಂಗಳಿಂದ ಉದ್ಬವವಾಗಿದ್ದ ರಾಜಕೀಯ ಅನಿಸ್ಥಿತೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡು ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿ ರವಿವಾರ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ನಾನು ಬಿಜೆಪಿ ಕೋಮುವಾದಿ ಪಕ್ಷ ಎಂದು ಹಿಂದಿನಿಂದಲೂ ವಿರೋಧಿಸಿಕೊಂಡು ಬರುತಿದ್ದೆ. ಈಗಲೂ ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳುತ್ತೇನೆ. ಕೋಮುವಾದ, ಜಾತ್ಯಾತೀತವಾದ, ಕಮ್ಯುನಲ್ ವಾದ ಎಂದು ಮಾಡಿರುವವರು ರಾಜಕೀಯ ನಾಯಕರುಗಳೇ ಹೊರತು ಜನರಲ್ಲ, ಇಂದು ಯಾವ ವಾದವೂ ನಡೆಯುತಿಲ್ಲ, ಜನರು ದೇಶದಲ್ಲಿ ಯಾವುದನ್ನು ಒಪ್ಪಿಕೊಂಡಿದ್ದಾರೊ ಆ ಕಾಲಘಟ್ಟದಲ್ಲಿ ನಾವು ಹೋಗಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪಥನಗೊಳ್ಳಲು 20 ಜನ ಅನರ್ಹ ಶಾಸಕರು ಕಾರಣರಲ್ಲ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಹೊಂದಾಣಿಕೆಯೇ ಕಾರಣ ಜೊತೆಗೆ ಅಲ್ಲಿಂದಿಲ್ಲಿಗೆ ಚಾಡಿ ಹೇಳುತಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆಪರೇಷನ್ ಕಮಲಕ್ಕೆ ನಾವುಗಳು ಬಲಿಯಾಗಿದ್ದೇವೆ ಎಂದು ಆರೋಪ ಮಾಡುತಿದ್ದಾರೆ. ನಮ್ಮಗಳ ಬಗ್ಗೆ ಮಾತನಾಡಬೇಕಾದರೆ ಬಹಳ ಎಚ್ಚರುಕೆಯಿಂದ ಮಾತನಾಡಬೇಕು. ಹಣದಾಸೆಗೋ, ಪದವಿ ಆಸೆಗೋ ನಾವು ರಾಜೀನಾಮೆ ನೀಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವನಾಥ್ ಜೆಡಿಎಸ್ ಪಕ್ಷದಲ್ಲಿ ಅನುಕೂಲ ಪಡೆದು ವಿಷ ಉಣಿಸಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಹೇಳುತ್ತಾರೆ. ರಾಜ್ಯದಲ್ಲಿ ಯಾವ ರಾಜಕಾರಣಿಗಳಿಗೂ ಜನ ವಿಷ ಉಣಿಸಿಲ್ಲ, ದೇವೇಗೌಡರ ಕುಟುಂಬಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್ ವಿಷ ಉಣಿಸಿದ್ದಾನೆ ಎಂದು ಆರೋಪ ಮಾಡಿದರು.

ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದಗದರೂ ಕೆ.ಆರ್.ನಗರದ ಪುರಸಭಾ ಚುನಾವಣೆಯಲ್ಲಿ ನಾನು ಮತ್ತು ನನ್ನ ಕುಟುಂಬ ಮತ ಹಾಕುವ ನನ್ನ ಕೇರಿ ವ್ಯಕ್ತಿಗೆ ಜೆಡಿಎಸ್ ಟಿಕೆಟ್ ಕೊಡಿಸಲು ಸಾಧ್ಯವಾಗಲಿಲ್ಲ, ನಾನು ಈಗಲೂ ಹೇಳುತ್ತೇ ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದಹಾಗೆ. ಆ ಪಕ್ಷದ ಮೇಲೆ ನನಗೆ ಅಪಾರ ಗೌರವವಿದೆ. ಆ ಪಕ್ಷ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ನಗರಕ್ಕೆ ಬಂದಾಗ ನನಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಲಿಲ್ಲ, ಇನ್ನೂ ಸಮನ್ವಯ ಸಮಿತಿ ಸಭೆಗಳಿಗೆ ನನ್ನನ್ನು ಬರದಂತೆ ತಡೆದರು ಇಷ್ಟೆಲ್ಲಾ ಅವಮಾನಕ್ಕೆ ಒಳಗಾದ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ತಿಳಿಸಿದರು.

 ನನ್ನ ಆಯ್ಕೆಮಾಡಿದ ಹುಣಸೂರು ಕ್ಷೇತ್ರದ ಜನರಲ್ಲಿ ಈಗಾಗಲೇ ಮಾಧ್ಯಮ ಮತ್ತು ಪತ್ರದ ಮೂಲಕ ಕ್ಷಮೆ ಕೇಳಿದ್ದು ಮತ್ತೊಮ್ಮೆ ನಿಮ್ಮಗಳ ಮೂಲಕ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ನನಗೆ ಟಿಕೆಟ್ ರಾಜಕಾರಣದಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಿದರು. ಹಾಗೆ ನನ್ನ ಮೇಲೆ ವಿಶ್ವಾಸ ಮತ್ತು ಪ್ರೀತಿ ಇಟ್ಟು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದರು. ಹಾಗಾಗಿ ಅವರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜಿಸುತ್ತೇನೆ. ಅವರನ್ನು ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News