×
Ad

ಉ.ಕ ದಲ್ಲಿ ಪ್ರವಾಹ: ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಮುಖ್ಯಮಂತ್ರಿ ಸೂಚನೆ

Update: 2019-08-04 19:20 IST

ಬೆಂಗಳೂರು, ಆ.4: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿಮಳೆ ಮತ್ತು ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಪ್ರವಾಹ ಉಂಟಾಗಿ ಜನ ತೊಂದರೆಗೆ ಒಳಗಾಗಿದ್ದು, ಯುದ್ಧೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ರೂಪಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ರವಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ, ಮತ್ತಿತರ ಪಡೆಗಳ ಸಹಾಯ ಪಡೆದುಕೊಂಡು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಪ್ರವಾಹ ಪೀಡಿತವಾಗಿರುವ ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳುವ ಮಾಹಿತಿ ಇದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಶಿವಾನಂದ ಶಂಕರ ನಾಯಕ್ ಎಂಬ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆ ಜರುಗಿದೆ. ಅಲ್ಲದೆ, ಹಲವಾರು ಬ್ರಿಡ್ಜ್, ಬ್ಯಾರೇಜುಗಳು ಮುಳುಗಿವೆ. ಜಿಲ್ಲಾಡಳಿತವು ತುರ್ತು ಪರಿಹಾರ ಕಾರ್ಯ ಕೈಗೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದಲ್ಲದೆ, ಪುನರ್ವಸತಿ ಕೆಲಸಗಳನ್ನು ಯುದ್ಧದೋಪಾದಿಯಲ್ಲಿ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಕೆಲವು ಕಡೆ ಪರಿಹಾರ ಕ್ರಮಗಳನ್ನು ಜರುಗಿಸಿದ್ದು, ಅವುಗಳನ್ನು ತೀವ್ರಗೊಳಿಸುವ ಅಗತ್ಯವಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡು ಗ್ರಾಮಗಳು ನಡುಗಡ್ಡೆಗಳಾಗಿ ಮಾರ್ಪಟ್ಟಿವೆ. ಅಲ್ಲಿ ಸಿಲುಕಿಕೊಂಡಿರುವ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಬೇಕು. ತಕ್ಷಣದ ಕ್ರಮವಾಗಿ ಜಿಲ್ಲಾಧಿಕಾರಿಗಳು ಆಹಾರ, ವಸ್ತ್ರಗಳು, ಹೊದಿಕೆ ಇತ್ಯಾದಿ ಸೌಕರ್ಯಗಳನ್ನು ನಿರಾಶ್ರಿತರಿಗೆ ಒದಗಿಸುವುದಲ್ಲದೆ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಡಳಿತ ಪ್ರವಾಹಕ್ಕೆ ಸಿಲುಕಿದ ಸ್ಥಳಗಳಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿರುವುದು ಮೆಚ್ಚತಕ್ಕದ್ದು. ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವತ್ತ ಕೂಡ ಗಮನ ಹರಿಸಬೇಕು. ಎನ್‌ಡಿಆರ್‌ಎಫ್ ನಿಂದ 3 ತಂಡಗಳು ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸದ್ಯ ಕಾರ್ಯೋನ್ಮುಖವಾಗಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ತಂಡಗಳನ್ನು ನಿಯೋಜಿಸಿಕೊಳ್ಳಿ. ಸೇನೆ ಹಾಗೂ ಎಸ್‌ಡಿಆರ್‌ಎಫ್ ಸೇವೆಯನ್ನು ಕೂಡ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸ್, ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಅಹೋರಾತ್ರಿ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಪುನರ್ವಸತಿ ಕೇಂದ್ರಗಳಲ್ಲಿ ಉತ್ತಮ ಆಹಾರ, ಶುದ್ಧ ಕುಡಿಯುವ ನೀರು, ಹಾಲು ಮತ್ತಿತರ ತುರ್ತು ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಬೇಕೆಂದು ಅವರು ಹೇಳಿದ್ದಾರೆ.

ಕೃಷ್ಣಾ ನದಿ ತೀರದ ಗ್ರಾಮಗಳು ಹಾಗೂ ಕೃಷಿ ಜಮೀನುಗಳು ಮುಳುಗಡೆ ಆಗಿವೆ. ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವುದು ಅಗತ್ಯ. ನದಿ ತೀರದ ಗ್ರಾಮಗಳಲ್ಲಿ ನೀರು ಬಿಡುಗಡೆ ಮಾಡುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳೊಡನೆ ಸಂಪರ್ಕ ಸಾಧಿಸಿ, ಅಣೆಕಟ್ಟುಗಳಿಂದ ನೀರು ಹರಿಸುವ ಮುನ್ನ ಮಾಹಿತಿ ನೀಡುವಂತೆ ಹಾಗೂ ನದೀ ತೀರದ ಜನರನ್ನು ಎಚ್ಚರಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ.

ಹಣಕಾಸಿನ ಲಭ್ಯತೆ: ಬೆಳಗಾವಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 11.42 ಕೋಟಿ ರೂ., ವಿಜಯಪುರ ಪಿ.ಡಿ.ಖಾತೆಯಲ್ಲಿ 9.10 ಕೋಟಿ ರೂ. , ಬಾಗಲಕೋಟೆ ಪಿ.ಡಿ. ಖಾತೆಯಲ್ಲಿ 10.55 ಕೋಟಿ ರೂ., ರಾಯಚೂರು ಪಿ.ಡಿ. ಖಾತೆಯಲ್ಲಿ 13.02 ಕೋಟಿ ರೂ. ಹಾಗೂ ಯಾದಗಿರಿ ಪಿ.ಡಿ. ಖಾತೆಯಲ್ಲಿ 10.29 ಕೋಟಿ ರೂ. ಅನುದಾನ ಲಭ್ಯವಿದೆ.

ನಾಳೆ ವೈಮಾನಿಕ ಸಮೀಕ್ಷೆ:

ರಾಯಚೂರು, ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಹಳ್ಳಿಗಳು ಮುಳುಗಡೆಯಾಗಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಸೂಕ್ತ ಪರಿಹಾರೋಪಯಗಳ ಕುರಿತು ಚರ್ಚೆಸಿದ್ದೇನೆ. ನಿರಾಶ್ರಿತರಿಗೆ ಶಾಲೆಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇಂದು ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ನಾಳೆ (ಆ.5) ಬೆಳಗ್ಗೆ 9ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು 9.50ಕ್ಕೆ ಬಳ್ಳಾರಿಯ ಜಿಂದಾಲ್ ಏರ್‌ಸ್ಟ್ರಿಪ್‌ನಲ್ಲಿ ಇಳಿಯಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮಧ್ಯಾಹ್ನ 12ಕ್ಕೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News